ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

Small step for Free Information

ಮುಕ್ತ ಮಾಹಿತಿ ಪಡೆಯಲು, ಕೊಡಲು ಪುಟ್ಟ ಹೆಜ್ಜೆ ಇಡಿ


ನಮ್ಮ ಕೆಲವು ಗೆಳೆಯರ ಪ್ರಕಾರ ಮಾಹಿತಿ ಇರುವುದೇ ಹಂಚಿಕೊಳ್ಳಲು. ಈಗ ಮಾಹಿತಿ ಪಡೆಯುವ ಹಕ್ಕು ಕಾಯ್ದೆ ಬಂದಿದ್ದರೆ ಅದು ನಮ್ಮೆಲ್ಲರ ಮೂಲ ವಿಚಾರವನ್ನು ಬೆಂಬಲಿಸಿದ ಕಾನೂನಿನ ಕ್ರಮ ಅಷ್ಟೆ! ಮಾಹಿತಿಸ್ಫೋಟದ ಯುಗ ಎಂದು ಸಿಕ್ಕಾಪಟ್ಟೆ ಹೊಗಳಿದ ಈ ಕ್ಷಣಗಳಲ್ಲಿ ಮಾಹಿತಿಗಳನ್ನು ತಮ್ಮೊಳಗೇ ಅಡಗಿಸಿ ಇಟ್ಟುಕೊಳ್ಳುವವರೂ ಇದ್ದಾರೆ.
ಅಂತರಜಾಲದಲ್ಲಿ ಉಚಿತವಾಗಿ ಪುಸ್ತಕಗಳನ್ನು ಕೊಡುವ ಜಾಲತಾಣಗಳಿವೆಯೇಎಂದು ನಾನು ಮೊದಲ ಪೀಳಿಗೆಯ ಡಯಲ್ ಅಪ್ ಸಂಪರ್ಕವನ್ನು ಬಳಸಿಯೇ ಗಂಟೆಗಟ್ಟಳೆ ಕಳೆಯುತ್ತಿದ್ದೆ. ಆ ಹೊತ್ತಿನಲ್ಲಿ ನನಗೆ ಯು ಎನ್ ಡಿ ಪಿ ಯ ಒಂದು ಜಾಲತಾಣ ಸಿಕ್ಕಿತು. ಇಂಥ ಪುಸ್ತಕ ಎಂದು ಗುರುತಿಸಿ, ಅಂಚೆ ವಿಳಾಸ ಕೊಟ್ಟರಾಯಿತು, ಪುಸ್ತಕವನ್ನು ಕಳಿಸಿಕೊಡುತ್ತೇವೆ ಎಂದು ಅದರಲ್ಲಿ ಘೋಷಿಸಲಾಗಿತ್ತು. ಸರಿ, ಪುಕ್ಕಟೆ ಸಿಕ್ಕರೆ ಯಾಕೆ ಬಿಡಬೇಕು ಎಂದು ಕೆಲವು ಪುಸ್ತಕಗಳನ್ನು ಟಿಕ್ ಮಾಡಿ, ವಿಳಾಸ ತುಂಬಿ ಅರ್ಜಿ ಸಲ್ಲಿಸಿದೆ. ಒಂದೇ ತಿಂಗಳಲ್ಲಿ ಅಂಚೆ ಕಚೇರಿಯಿಂದ ಚೀಟಿ ಬಂತು: `ನಿಮಗೆ ಯಾವುದೋ ಪಾರ್ಸೆಲ್ ಅಮೆರಿಕಾದಿಂದ ಬಂದಿದೆ, ಅದನ್ನು ಅಂಚೆ ಅಣ್ಣ ಹೊತ್ತೊಯ್ಯಲು ಸಾಧ್ಯವಿಲ್ಲ. ಕಚೇರಿಗೇ ಬಂದು ಸಂಗ್ರಹಿಸಿ'. ಇದೇನಪ್ಪಾ ಎಂದು ಅಲ್ಲಿಗೆ ಹೋದರೆ ಇಪ್ಪತ್ತು ಕಿಲೋಗ್ರಾಂ ಭಾರದ ಪಾರ್ಸೆಲ್ ಕಣ್ಣು ಮಿಟುಕಿಸಿತ್ತು. ಅಮೆರಿಕಾದ ವಾತಾವರಣ ಸಮೀಕ್ಷೆಯ ಇಪ್ಪತ್ತು ಪುಸ್ತಕಗಳು, ಅದರದ್ದೇ ಸಂಕ್ಷಿಪ್ತ ರೂಪದ ಹತ್ತು ಪುಸ್ತಕಗಳು ಅದರಲ್ಲಿದ್ದವು. ನನ್ನ ಹಲವು ಗೆಳೆಯರಿಗೆ ಅದನ್ನು ಕೊಟ್ಟೆ. ಸಾವಿರಾರು ಪುಟಗಳ ಬಹುವರ್ಣದ ಪುಸ್ತಕಗಳು ನಿಜಕ್ಕೂ ಉಪಯುಕ್ತವಾಗಿದ್ದವು. ಬಹುಶಃ ಕೆಲವು ಸಾವಿರ ರೂಪಾಯಿಗಳ ಮುಖಬೆಲೆ ಅವುಗಳಿಗಿತ್ತು.
ಪ್ರಾಜೆಕ್ಟ್ ಗುಟೆನ್‌ಬರ್ಗ್ ಎನ್ನುವುದು ಅಂತರಜಾಲ ಬರುವುದಕ್ಕೆ ಮುಂಚೆಯೇ ಆರಂಭವಾಗಿದ್ದ  ವಿದ್ಯುನ್ಮಾನ ರೂಪದ ಹಕ್ಕುಸ್ವಾಮ್ಯ ಮುಕ್ತ ಪುಸ್ತಕಗಳ ಸಂಗ್ರಹದ ಬೃಹತ್ ಯೋಜನೆಯದು. ಈಗ ಈ ಯೋಜನೆ ದಶದಿಕ್ಕುಗಳಲ್ಲಿ ಹರಡಿದೆ. ನಾಲ್ಕು ವರ್ಷಗಳ ಹಿಂದೆ ಕ್ಲಾಸಿಕ್ ಇಂಗ್ಲಿಶ್ ಪುಸ್ತಕಗಳ ಬಗ್ಗೆ ಆಸಕ್ತಿ ಹೆಚ್ಚಿ  ಗುಟೆನ್‌ಬರ್ಗ್ ಜಾಲತಾಣದಲ್ಲಿ ವಿನಂತಿಸಿದೆ: `ನನಗೆ ಪುಸ್ತಕಗಳ ಸಂಗ್ರಹದ ಒಂದು ಕಾಂಪಾಕ್ಟ್ ಡಿಸ್ಕ್ (ಸಿಡಿ) ಕಳಿಸಿಕೊಡಿ'. ಒಂದೇ ತಿಂಗಳಲ್ಲಿ ಬಂತಲ್ಲ… ಒಂದಲ್ಲ.. ಎರಡು ಸಿಡಿಗಳು… ವಿಶ್ವದ ಯಾವುದೋ ಮೂಲೆಯಲ್ಲಿದ್ದ ಯಾವುದೋ ಗುಟೆನ್‌ಬರ್ಗ್ ಸ್ವಯಂಸೇವಕ ನನಗಾಗಿ ಎರಡು ಸಿಡಿಗಳನ್ನು ಕಳಿಸಿದ್ದ. ಇಲ್ಲಿ ಯಾರು ಬೇಕಾದರೂ, ಯಾರಿಗೆ ಬೇಕಾದರೂ ಕೋರಿಕೆಯ ಮೇರೆಗೆ ಉಚಿತ ಸೇವೆ ಸಲ್ಲಿಸಬಹುದು. ಪುಸ್ತಕಗಳ ಅಕ್ಷರಜೋಡಣೆ (ಕಂಪೋಸಿಂಗ್) ಮಾಡುವುದೂ ಒಂದು ಉಚಿತ ಸೇವೆಯೇ (ಗುರುದ್ವಾರಗಳಲ್ಲಿ ಬೂಟು ಒರೆಸುವ, ಚಪ್ಪಲಿ ಕಾಯುವ ಸೇವೆಯನ್ನು ಮಾಡುವ ಹಾಗೆ). `ನಿಮಗೊಂದು ಸಿಡಿ ಇದೆ. ಹಾಗೆಯೇ ನಿಮ್ಮ ಇನ್ನೊಬ್ಬ ಮಿತ್ರರಿಗೆ ಅಂತ ಇನ್ನೊಂದು ಸಿಡಿ ಕಳಿಸಿದ್ದೇನೆ. ಖುಷಿಪಡಿ' ಎಂದಾತ ಬರೆದಿದ್ದ.
`ಎಥಿಕಲ್ ಕಾರ್ಪ್' ಎನ್ನುವ ಮ್ಯಾಗಜಿನ್ ಇದೆ. ಕಾರ್ಪೋರೇಟ್ ಜಗತ್ತಿನಲ್ಲಿ ಯಾವ ರೀತಿ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಲಾಗುತ್ತಿದೆ ಎಂಬ ಬಗ್ಗೆ ಲೇಖನಗಳನ್ನು  ಈ ಬಹುವರ್ಣದ ಮ್ಯಾಗಜಿನ್ ಪ್ರಕಟಿಸುತ್ತದೆ. ಈ ಪತ್ರಿಕೆಯ ಮೂರು ಸಂಚಿಕೆಗಳನ್ನು ನನಗಾಗಿ ಉಚಿತವಾಗಿ ಕಳಿಸಿದ್ದರು.
ಇವಿಷ್ಟೇ ಅಲ್ಲ, ವಿಶ್ವಸಂಸ್ಥೆಯ ಹಲವು ಜಾಲತಾಣಗಳಲ್ಲಿ, ಆರ್ಕೈವ್ ಎಂಬ ಜಾಲತಾಣದಲ್ಲಿ, ಇತರೆ ನೂರಾರು ಜಾಲತಾಣಗಳಲ್ಲಿ ನೀವು ಉಚಿತವಾಗಿಯೇ ಪುಸ್ತಕಗಳ ಎಲೆಕ್ಟ್ರಾನಿಕ್ ಕಡತಗಳನ್ನು (ಫೈಲ್) ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಬಹುದು. ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದ ಪಠ್ಯಕ್ರಮವನ್ನು ನೀವೀಗ ತಿಳಿಯಬಹುದು. ಹಲವು ಮ್ಯಾಗಜಿನ್‌ಗಳನ್ನು, ದಿನಪತ್ರಿಕೆಗಳನ್ನು ನೀವು ಕಾಗದದ ರೂಪದಲ್ಲೇ ಗಣಕದಲ್ಲಿ ಓದಬಹುದು.
ನಾನಿಲ್ಲಿ ಅಂತರಜಾಲದಲ್ಲಿ ಮ್ಯಾಗಜಿನ್‌ಗಳು, ಪುಸ್ತಕಗಳು ಉಚಿತವಾಗಿ ಸಿಗುತ್ತವೆ ಎಂದು ಹೇಳಲು ಹೊರಟಿಲ್ಲ.  ಯಾಕೆಂದರೆ ಇಂದು ಅಂತರಜಾಲದಲ್ಲಿ ಉಚಿತವಾಗಿ ಸಿಗುವ ಎಲ್ಲ ದಿನಪತ್ರಿಕೆಗಳು ಮತ್ತು ಮ್ಯಾಗಜಿನ್‌ಗಳು ಮುಂದಿನ ದಿನಗಳಲ್ಲಿ ಶುಲ್ಕಸಹಿತದ ಸೇವೆಗಳಾಗುವ ಸಾಧ್ಯತೆಗಳಿವೆ. ಆದ್ದರಿಂದ ಉಚಿತ ಮಾಹಿತಿ ಹಂಚಿಕೆ ಎನ್ನುವುದು ಮತ್ತೆ ಸೀಮಿತವಾಗುವ ದಿನಗಳು ದೂರವಿಲ್ಲ. ಎಲ್ಲೋ ಕೆಲವು ಸಂಸ್ಥೆಗಳು ಮಾತ್ರವೇ ಉಚಿತ ಸೇವೆಯನ್ನು ಮುಂದುವರಿಸಬಹುದು. ವಿಶ್ವಸಂಸ್ಥೆಯಂಥ ಸಾರ್ವಜನಿಕ ಸಂಸ್ಥೆಗಳೂ ಕೆಲವು ಪುಸ್ತಕಗಳನ್ನು ಕನಿಷ್ಠ ಬೆಲೆಗೆ ಮಾರುತ್ತಿವೆ ಎನ್ನುವುದನ್ನು ಗಮನಿಸಿ.
ಮಾಹಿತಿಯ ಮಜಾವೇ ಬೇರೆ. ಮಾಹಿತಿಯನ್ನು ಹಂಚಿಕೊಂಡಷ್ಟೂ ಹೊಸ ಮಾಹಿತಿ ಮತ್ತೆ ನಮ್ಮೊಳಗೆ ಸೇರಿಕೊಳ್ಳುತ್ತದೆ ಎನ್ನುವುದು ನನ್ನ ಅನುಭವ. ಮಾಹಿತಿಯೂ ಹರಿವ ನೀರಿನ ಹಾಗೆಯೇ. ಹೊಲದಲ್ಲಿ ಬದು ಒಡೆದು ನೀರನ್ನು ಹರಿಯಬಿಟ್ಟರೆ ಮತ್ತೆ ಮೇಲಿನಿಂದ ನೀರು ಬಂದು ಸೇರಿಕೊಳ್ಳುವ ಹಾಗೆ. ಹೊಸನೀರು ಬರುತ್ತಲೇ ಇರುತ್ತದೆ. ಆದ್ದರಿಂದ ನಿಮ್ಮೊಳಗೆ ಮಾಹಿತಿ ಮಡುಗಟ್ಟಲು ಬಿಡಬೇಡಿ. ಸುತ್ತಮುತ್ತಲಿನ ವ್ಯಕ್ತಿಗಳಿಗೆ, ಶಾಲೆಯ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಂಸ್ಥೆಗಳಿಗೆ ಹಂಚಿ.
ಬೆಂಗಳೂರು ವಿಶ್ವವಿದ್ಯಾಲಯವು ನಡೆಸಿದ ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರ ಕಾರ್ಯಾಗಾರದಲ್ಲಿ ನಾನು `ತಾಂತ್ರಿಕ ಬರವಣಿಗೆ ಮತ್ತು ಸಂಪಾದನೆ' ಎಂಬ ಪಾಠವನ್ನು ಹಾಗೂ ಹೀಗೂ ಇಂಗ್ಲಿಶಿನಲ್ಲಿ ಮಾಡಿದೆ. ಆಮೇಲೆ ಭಾಗವಹಿಸಿದವರಿಗೆ ಅನುಕೂಲವಾಗಲಿ ಎಂದು ನನ್ನ ಸಂಗ್ರಹದಲ್ಲಿದ್ದ ೨೫೦೦ ಪುಟಗಳ ತಾಂತ್ರಿಕ ಬರೆವಣಿಗೆ ಕುರಿತ ಎಲೆಕ್ರಾನಿಕ್ ಪುಸ್ತಕಗಳನ್ನು, ಕಂಪ್ಯೂಟರ್‌ನಲ್ಲೇ ಬಳಸಬಹುದಾದ, ಓದಬಹುದಾದ ಹತ್ತಾರು  ನಿಘಂಟು ತ ಂತ್ರಾಂಶಗಳನ್ನು ಒಂದು ಸಿಡಿಯಲ್ಲಿ ಹಾಕಿ ಕೊಟ್ಟೆ. ಯಾರು ಎಷ್ಟು ಪ್ರಯೋಜನ ಪಡೆದರು ಎಂದು ನನಗಿನ್ನೂ ಗೊತ್ತಾಗಿಲ್ಲ. ಮಾಹಿತಿಯನ್ನು ಹಂಚಿಕೊಂಡ ಪುಟ್ಟ ಸಮಾಧಾನ ನನ್ನೊಳಗಿದೆ. ಯಾಕೆಂದರೆ ನನಗೂ ಹೀಗೆ ಪುಸ್ತಕಗಳನ್ನು ಕೊಡುವ ಸಹಾಯಹಸ್ತಗಳು ಬೇಕಾದಷ್ಟಿವೆಯಲ್ಲ?
ನಾನೂ ಕೆಲವೊಮ್ಮೆ ಯೋಚಿಸುತ್ತೇನೆ : ನನಗೆ ದೊರೆತ ಒಳ್ಳೆಯ ಮಾಹಿತಿಯನ್ನು ನಿಮಗೆ ಯಾಕೆ ಕೊಡಬೇಕು? ಮಾಹಿತಿಯೇ ಒಂದು ಸರಕಲ್ಲವೆ? ಅದನ್ನು ಉಚಿತವಾಗಿ ನೀಡಬೇಕೆ? ನಮಗೆ ಮಾಹಿತಿ ಪಡೆಯಲು ಆದ ಖರ್ಚು ಹುಟ್ಟುವುದು ಬೇಡವೆ? ನಮ್ಮ ಸಮಯಕ್ಕೆ ಬೆಲೆಯಿಲ್ಲವೆ? ನಮಗೂ ಬೇರೆ ಕೆಲಸ ಇದೆಯಲ್ಲ….. ಹೀಗೆ ಹಲವು ಮಾಹಿತಿಯುಕ್ತ ವ್ಯಕ್ತಿಗಳು ಪ್ರಶ್ನಿಸುವುದನ್ನು ನಾನು ನೋಡಿದ್ದೇನೆ. ನಿಜ. ಮಾಹಿತಿ ಕಲೆಹಾಕಲು ಶ್ರಮ ಹಾಕಿದ್ದೀರಿ. ಆದರೆ ನಿಮಗೆ ಸಿಕ್ಕ ಮಾಹಿತಿಯೂ ಇಂಥ ಯಾವುದೋ ಶ್ರಮದಿಂದಲೇ ರೂಪುಗೊಂಡಿದೆ. ಅದಕ್ಕಾಗಿ ಆದ ಖರ್ಚನ್ನೇನೂ ನೀವು ಕೊಟ್ಟಿಲ್ಲ. ಇಷ್ಟಾಗಿ ಇವತ್ತು ಮಾಹಿತಿಯನ್ನು ಹೆಚ್ಚು ಖರ್ಚಿಲ್ಲದೆ ಹಂಚಿಕೊಳ್ಳುವುದಕ್ಕೆ ಸಾಧ್ಯವಿದೆಯಲ್ಲ? ಇಷ್ಟಕ್ಕೂ ಸಾರ್ವಜನಿಕ ಅಗತ್ಯಗಳಿಗಾಗಿ ಮಾಹಿತಿಯನ್ನು ಯಥೋಚಿತವಾಗಿ ಹಂಚಿಕೊಳ್ಳುವುದಾದರೂ ಆಗಬೇಕಲ್ಲ?
ಉಳ್ಳದವರಿಗೆ ಮಾಹಿತಿ ಉಚಿತವಾಗಿರಬೇಕು. ಮತ್ತು ಸಂಪೂರ್ಣವಾಗಿರಲೂ ಬೇಕು. ಅರ್ಧಂಬರ್ಧ ಮಾಹಿತಿಯಿಂದ ಏನೂ ಪ್ರಯೋಜನವಿಲ್ಲ. ನೂರಾರು ಪ್ರತಿಗಳನ್ನು ಕಾಗದದ ಮೇಲೆ ಮುದ್ರಿಸಿ ಪ್ರಕಟಿಸುವುದೂ ಒಂದು ಅಗತ್ಯವೇ ಆಗಿರಬಹುದು. ಆದರೆ ಕಂಪ್ಯೂಟರ್ ಕಡತಗಳ ಮೂಲಕ ಪುಸ್ತಕಗಳನ್ನು ಹಂಚಿಕೊಳ್ಳುವ ಕೆಲಸ   ಕಡಿಮೆ ಖರ್ಚಿನದು. ಅಲ್ಲದೆ ಬೇಕಿದ್ದಾಗ ಅವನ್ನು ಮುದ್ರಿಸಿಕೊಳ್ಳುವುದಕ್ಕೂ ಅವಕಾಶವಿದೆ.
ಮುಂದೆ ಮಾಹಿತಿಯೂ ಒಂದು ವಾಣಿಜ್ಯದ ಸರಕಾಗುವ ಮುನ್ನ  ನೀವು ಏನು ಮಾಡಬಹುದು ಎಂದು ಯೋಚಿಸಿ. ಮೊದಲು ಮಾಹಿತಿಯನ್ನು ಹಂಚಿಕೊಳ್ಳೋಣ. ಈ ಪ್ರವೃತ್ತಿ ಇನ್ನೂ ಶುರುವಾಗಿದೆಯಷ್ಟೆ.  ಈ ಸಂಸ್ಕೃತಿ ಬೆಳೆದ ಮೇಲೆ  ಅದು ಎಷ್ಟು ಉಚಿತವಾಗಿರಬೇಕು, ಎಷ್ಟು ಖರ್ಚು ಹುಟ್ಟಬೇಕು ಎಂದು ಚರ್ಚಿಸೋಣ. ಸಬಲೀಕರಣ ಕೇವಲ ಮಹಿಳೆಯರಿಗಷ್ಟೇ ಅಲ್ಲ, ಮಾಹಿತಿಯೇ ಸಿಗದೆ ಹಳೆ ಹಳವಂಡಗಳಲ್ಲೇ ಸಿಕ್ಕಿಕೊಂಡಿರುವ ನಮ್ಮ ಸಮುದಾಯದ ಹಲವು ಗುಂಪುಗಳಿಗೂ ಮಾಹಿತಿ ಸಬಲೀಕರಣದ ಅಗತ್ಯವಿದೆ. ಆಮೇಲೆ ವ್ಯವಹಾರ.
ಬನ್ನಿ, ಮುಕ್ತಮಾಹಿತಿಗಾಗಿ ಪುಟ್ಟ ಹೆಜ್ಜೆ ಇಡೋಣ !
ಗುಟೆನ್‌ಬರ್ಗ್ ಜಾಲತಾಣ: www.promo.net/pg

Leave a Reply

Theme by Anders Norén