ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

Sopan, a STEP in right direction

ಹಳ್ಳಿಯಿಂದ ದಿಲ್ಲಿಗೆ ಅಭ್ಯುದಯದ `ಸೋಪಾನ'

ದಿಲ್ಲಿ ಪತ್ರಕರ್ತರಿಂದ ಹಳ್ಳಿಮುಖೀ ಪತ್ರಿಕೋದ್ಯಮ
ಮುಖ್ಯವಾಹಿನಿ ಪತ್ರಿಕೆಗಳು ಹೆಚ್ಚು ಗಮನ ಕೊಡದ ಸಾಮಾಜಿಕ ಸಂಗತಿಗಳ ಬಗ್ಗೆ ಬೆಳಕು  ಚೆಲ್ಲಲು ದೇಶದ ಮುಖ್ಯವಾಹಿನಿ ಪತ್ರಿಕೆಯ ಪತ್ರಕರ್ತನೊಬ್ಬ  ತನ್ನ ಸಮಾನಮನಸ್ಕ ಗೆಳೆಯರೊಂದಿಗೆ ಪುಟ್ಟ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಈ ಪ್ರಯತ್ನಕ್ಕೆ ನಿಧಾನವಾಗಿ ದೇಶದೆಲ್ಲೆಡೆ ಪ್ರೀತಿ, ಗೌರವ ಸಿಗುತ್ತಿದೆ.
ಯೂರಿಯಾ ಹಗರಣವನ್ನು ಬಯಲಿಗೆಳೆದು ದೇಶದ ಗಮನ ಸೆಳೆದ ದಿಲ್ಲಿಯ ಹಿರಿಯ ಪತ್ರಕರ್ತ ಕೆ. ಎ. ಬದರಿನಾಥ್ ಈಗ ಹಳ್ಳಿಮುಖಿ ಮಾಸಪತ್ರಿಕೆಯನ್ನು ದಿಲ್ಲಿಯಿಂದಲೇ ತರುವ ಸಾಹಸ ಮಾಡಿದ್ದಾರೆ. `ಸೋಪಾನ – ಸ್ಟೆಪ್' ಎಂಬ ದ್ವಿಭಾಷಾ ಶೀರ್ಷಿಕೆಯ ಈ ಪತ್ರಿಕೆಯು ವರ್ಣರಂಜಿತ ಪುಟಗಳಲ್ಲಿ, ಹಿಂದಿ ಮತ್ತು ಇಂಗ್ಲಿಶ್ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ.
ಕಳೆದ ಅಕ್ಟೋಬರಿನಿಂದ ಪ್ರಕಟಣೆ ಆರಂಭಿಸಿದ  `ಸೋಪಾನ'ದ ಪ್ರಸರಣವು ಯಾವುದೇ ಪ್ರಚಾರವೂ ಇಲ್ಲದೆ ೨ ಸಾವಿರದಿಂದ ೬ ಸಾವಿರಕ್ಕೆ  ಹೆಚ್ಚಿರುವುದೇ ಇದಕ್ಕೆ ನಿದರ್ಶನ. `ನಮ್ಮ ಕಚೇರಿಗೆ ದಿನವೂ ಚಂದಾ ಹಣದ ಚೆಕ್ಕುಗಳು ಬರುತ್ತವೆ' ಎಂದು ಖುಷಿಯಿಂದ ಹೇಳುತ್ತಾರೆ ಬದರೀನಾಥ್. ಈ ಪತ್ರಿಕೆಯನ್ನು ಇಂಡಿಯಾ ಫೌಂಡೇಶನ್ ಫಾರ್ ರೂರಲ್ ಡೆವಲಪ್‌ಮೆಂಟ್ ಸ್ಟಡೀಸ್ (ಇನ್‌ಫೋರ್ಡ್ಸ್) ಎಂಬ ಹೊಸ ಸರ್ಕಾರೇತರ ಸಂಸ್ಥೆಯ ಮೂಲಕ ಪ್ರಕಟಿಸಲಾಗುತ್ತಿದೆ. ಹಾಗೆ ನೋಡಿದರೆ ಇನ್‌ಫೋರ್ಡ್ಸ್‌ನಲ್ಲಿ ಇರುವವರು ಹೆಚ್ಚಾಗಿ ದಿಲ್ಲಿ ವಿವಿಧ ಪತ್ರಿಕೆಗಳಲ್ಲಿಕೆಲಸ ಮಾಡಿರುವ, ಮಾಡುತ್ತಿರುವ ಪತ್ರಕರ್ತರು. ವೃತ್ತಿಪರತೆಯನ್ನು  ಗಳಿಸಿಕೊಂಡ ಪತ್ರಕರ್ತರು ದೇಶದ ಅಭ್ಯುದಯ ಕಾಯಕದಲ್ಲೂ ಭಾಗವಹಿಸಲಿ, ಬದಲಾವಣೆ ತರಲಿ ಎಂಬುದೇ ತನ್ನ ಯೋಜನೆಯ ಹಿಂದಿನ ಉದ್ದೇಶ ಎನ್ನುತ್ತಾರೆ ಬದರೀನಾಥ್.
ಮೊದಲು ಯಾರೂ ಹೆಚ್ಚಾಗಿ ಗಮನ ಕೊಡದ ಸಾಮಾಜಿಕ, ಸ್ವಯಂಸೇವಾ ಸಂಘಟನೆಗಳು ಮತ್ತು ಹಳ್ಳಿಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ಗಮನ ಕೇಂದ್ರೀಕರಿಸುವುದು `ಸೋಪಾನ'ದ ಮೊದಲ ಹೆಜ್ಜೆ. ಆದ್ದರಿಂದಲೇ ಈ ಪತ್ರಿಕೆಯ ಸಂಚಿಕೆಗಳಲ್ಲಿ  ದೇಶದ ಮೂಲೆಮೂಲೆಗಳಲ್ಲಿ ನಡೆಯುವ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಸ್ತುನಿಷ್ಠ ವರದಿಗಳು , ನುಡಿಚಿತ್ರಗಳು ಪ್ರಕಟವಾಗಿವೆ. ಉಪ್ಪು, ನೀರು, ಸ್ವಯಂಸೇವಾ ಸಂಘಟನೆಗಳ ಕರಾಳ ಮುಖಗಳು, ಪಂಚಾಯತಿ ರಾಜ್ ವ್ಯವಸ್ಥೆ, ಗುಡ್ಡಗಾಡು ಜನರ ಸಮಸ್ಯೆಗಳು, ಭಾರತೀಯ ಕೃಷಿಯ ಇಂದಿನ ಸ್ಥಿತಿ,  ಗ್ರಾಮೀಣ ಶಿಕ್ಷಣ… ಹೀಗೆ ಹತ್ತು ಹಲವು ಅಭ್ಯದಯ ಸಂಗತಿಗಳ ಬಗ್ಗೆ `ಸೋಪಾನ'ದ ಸಂಚಿಕೆಗಳು ವರದಿ ಮಾಡಿವೆ. ಅಚ್ಚುಕಟ್ಟಾದ ಮುದ್ರಣ, ಪೂರಕ ಛಾಯಾಚಿತ್ರಗಳು, ಆಕರ್ಷಕ ಪುಟ ವಿನ್ಯಾಸಗಳಿಂದ `ಸೋಪಾನ'ವು ಈಗಾಗಲೇ ಅಭ್ಯುದಯಪರರ ಮೆಚ್ಚಿನ ಪತ್ರಿಕೆಯಾಗಿದೆ. ಹಿಂದಿಯಲ್ಲಿ ಇರುವ ಲೇಖನಗಳು ಇಂಗ್ಲಿಶಿನಲ್ಲಿ ಮರುಕಳಿಸದೇ ಇರುವುದರಿಂದ ಪತ್ರಿಕೆಯ ಹೂರಣ ವೈವಿಧ್ಯಮಯವಾಗಿದೆ.
ಮೊದಲು ಇಂಥ ಸಾಮಾಜಿಕ ಸಂಘಟನೆಗಳ ಒಂದು ಜಾಲವನ್ನು ನಿರ್ಮಿಸಿ ಆಮೇಲೆ ಕ್ರಮೇಣವಾಗಿ ಹೊಸ ಹೊಸ ಅಭ್ಯುದಯ ಯೋಜನೆಗಳನ್ನು ಸ್ಥಳೀಯವಾಗಿ ಜಾರಿ ಮಾಡುವುದು ಇನ್‌ಫೋರ್ಡ್ಸ್‌ನ ಗುರಿ.
`ನೋಡಿ, ಒರಿಸ್ಸಾದ ಸಂಭಾಲ್‌ಪುರದಲ್ಲಿ ಪತ್ರಿಕೋದ್ಯಮದ ಗಂಧಗಾಳಿಯೂ ಇಲ್ಲದ ಗುಡ್ಡಗಾಡು ಜನರು ಸಮುದಾಯ ರೇಡಿಯೋ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ನಾವು ಮುಂದೆ ಎತ್ತಿಕೊಳ್ಳಬಹುದಾದ ಅಭ್ಯುದಯ ಯೋಜನೆಗಳ ಚಿಕ್ಕ ಝಲಕ್ ಇದು ಎಂದು ಬದರೀನಾಥ್ ಸೌಜನ್ಯದಿಂದ ಹೇಳುತ್ತಾರೆ. 
`ಮುಖ್ಯವಾಹಿನಿ ಪತ್ರಿಕೆಗಳು ಅಭ್ಯುದಯ ವರದಿಗಳಿಗೆ ಪುಟವನ್ನೇ ನೀಡುತ್ತಿದ್ದಾರೆ ನಿಜ. ಆದರೆ ರಾಜಕೀಯ ಸಂಬಂತ ಸುದ್ದಿಗಳೇ ಯಾಕೆ ಮುಖಪುಟದಲ್ಲಿ ಬರಬೇಕು? ಅಭ್ಯುದಯಕ್ಕೆ ಏಕೆ ಎಂಟನೇ ಪುಟ?' ಎಂದು ಪ್ರಶ್ನಿಸುವ ಬದರೀನಾಥ್‌ಗೆ ಇಂದಿನ ಪತ್ರಿಕೆಗಳು ಈ ಬಗ್ಗೆ ಹೆಚ್ಚು ಯೋಚಿಸಿಲ್ಲ ಎಂಬ ಆಕ್ರೋಶವಿದೆ. ಧನ್‌ಬಾದ್‌ನಲ್ಲಿ ಕ್ರಿಮಿನಲ್‌ಗಳು ಪರಾರಿಯಾದರೆ ಪಟನಾದಲ್ಲೇ ಕೂತು ವರದಿ ಬರೆಯುವವರಿಗೆ ಏನು ಹೇಳಬೇಕು ಎಂದು ಅವರು ಖಾರವಾಗಿ ಪ್ರಶ್ನಿಸುತ್ತಾರೆ.
ಬಹು ಆಯಾಮದ ಸಂಶೋಧನಾ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು, ಆರೋಗ್ಯ, ಶಿಕ್ಷಣ, ಪರಿಸರದ ಯೋಜನೆಗಳನ್ನು ಜಾರಿ ಮಾಡುವುದು, ಗ್ರಾಮೀಣ ಕರಕುಶಲಕರ್ಮಿಗಳ ಉತ್ಪನ್ನಗಳಿಗೂ ಉದ್ಯಮಕ್ಕೂ – ಮಾರುಕಟ್ಟೆಗೂ ಸಂಪರ್ಕ ಕಲ್ಪಿಸುವುದು, ಸ್ವಯಂಸೇವಾ ಸಂಘಟನೆಗಳ  ಜಾಲ ನಿರ್ಮಿಸುವುದು – ಇವು ಇನ್‌ಫೋರ್ಡ್ಸ್ ಘೋಷಿಸಿಕೊಂಡಿರುವ ಕೆಲವು ಉಪಕ್ರಮಗಳು.
`ನಾವು ಈಗ ಇಫ್ಕೋ ಜೊತೆಗೆ ಕೈ ಜೋಡಿಸಿದ್ದೇವೆ. ಅದರಡಿಯಲ್ಲಿ ದೇಶದಾದ್ಯಂತ ೩೫ ಸಾವಿರ  ಸಹಕಾರ ಸಂಘಗಳಿವೆ. `ಸೋಪಾನ' ಆರಂಭಿಸಿದದ ಮೇಲೆ ನಾವು ನಾಲ್ಕು ಸಾವಿರ ಸರ್ಕಾರೇತರ ಸಂಸ್ಥೆಗಳ ಜಾಲವನ್ನು ನಿರ್ಮಿಸಲು ಸಾಧ್ಯವಾಗಿದೆ. ಮೊದಲು ಕೊಂಚ ಮಬ್ಬಾಗಿದ್ದ ನಮ್ಮ ಕಾರ್ಯಯೋಜನೆಗೆ ಈಗ ದಿಕ್ಕು ದೆಸೆ ಸಿಕ್ಕಿದೆ' ಎಂದು ಬದರೀನಾಥ್ ಹೇಳುತ್ತಾರೆ.
ಅಂದಹಾಗೆ `ಸೋಪಾನ'ಕ್ಕೆ ದೇಶದಾದ್ಯಂತ ವರದಿಗಾರರಿದ್ದಾರೆ. ಕರ್ನಾಟಕದ ಸಾಮಾಜಿಕ ಕೆಲಸಗಳೂ `ಸೋಪಾನ'ದಲ್ಲಿ ಪ್ರಕಟವಾಗಿವೆ.  ಧಾರವಾಡದ ಅನಿತಾ ಪೈಲೂರು ಇತ್ತೀಚೆಗೆ ಬೈಫ್‌ನ ಗ್ರಾಮಚೇತನ ಯೋಜನೆಯ ಬಗ್ಗೆ ನುಡಿಚಿತ್ರ ಬರೆದಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಆಂಧ್ರಪ್ರದೇಶ ರಾಜ್ಯ ಕಾರ್ಯದರ್ಶಿಯಾಗಿದ್ದ ಅವರು ಐದು ವರ್ಷ ಎ ಬಿ ವಿ ಪಿ ಪೂರ್ಣಾವ ಕಾರ್ಯಕರ್ತರಾಗಿದ್ದರು. ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ  ಡಿಪ್ಲೋಮಾ ಮಾಡಿದ ಬದರೀನಾಥ್ ಮುಂದೆ ದಿಲ್ಲಿಯಲ್ಲಿ `ಆರ್ಗನೈಸರ್'ನಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ಆಮೇಲೆ ಆಂಧ್ರಜ್ಯೋತಿ, ಫೈನಾನ್‌ಶಿಯಲ್ ಎಕ್ಸ್‌ಪ್ರೆಸ್. ಇಲ್ಲಿ ಅವರ ಯೂರಿಯಾ ಹಗರಣದ ಸುದ್ದಿಗಳು ಬಿಸಿಬಿಸಿಯಾಗಿ ಪ್ರಕಟವಾದವು. ಈ ಪ್ರಕರಣ ಮುಚ್ಚಿಹಾಕಲು ಒಂದೂವರೆ ಕೋಟಿ ರೂ. ಆಮಿಷ ಒಡ್ಡಲಾಗಿತ್ತು ಎಂದು ಬದರಿ ಒಮ್ಮೆ ಹೇಳಿದ್ದರು. 
ಅವರೀಗ  ಪ್ರತಿಷ್ಠಿತ `ದಿ ಹಿಂದುಸ್ತಾನ್ ಟೈಮ್ಸ್‌ನಲ್ಲಿ ಹಿರಿಯ ಪತ್ರಕರ್ತರು. ಎಲ್ಲ ಸರಿಹೋದರೆ ಈ ವರದಿ ಪ್ರಕಟವಾಗುವ  ಹೊತ್ತಿಗೆ ಅವರಿಗೆ ಇನ್ನೊಂದು ಬಡ್ತಿಯೂ ಸಿಕ್ಕಿರುತ್ತದೆ.
ಆದರೆ ಹಳ್ಳಿಗಳಲ್ಲಿ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳನ್ನು ವಿಶ್ಲೇಷಣಾತ್ಮಕವಾಗಿ ಮುಂದಿಡುವ `ಸೋಪಾನ'ವೇ ಅವರ ಮುಂದಿನ ಹೆಜ್ಜೆಯನ್ನು ನಿರ್ಧರಿಸಿದಂತಿದೆ. ಮುಖ್ಯವಾಹಿನಿ ಪತ್ರಕರ್ತರು ಮನಸ್ಸು ಮಾಡಿದರೆ ಅಭ್ಯುದಯ ಪತ್ರಿಕೋದ್ಯಮವೂ ವೃತ್ತಿಪರವಾಗಿ ಬೆಳೆಯಬಹುದು ಎಂದು ಅವರು `ಸೋಪಾನ'ದ ಮೂಲಕ  ತೋರಿಸಿಕೊಟ್ಟಿದ್ದಾರೆ.

 

Leave a Reply

Theme by Anders Norén