ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!

`ನಮ್ಮ ಬಳಿ ಡಾಟಾ ಇಲ್ಲ. ಈ ಬಗ್ಗೆ ಒಂದು ವಿಶ್ವಸ್ತರದ ಸಂಸ್ಥೆಯ ಮೂಲಕ ಅಧ್ಯಯನ ಮಾಡಿಸುತ್ತೇವೆ’
ವಿಕಾಸಸೌಧದ ಆ ಸುಸಜ್ಜಿತ ಕೋಣೆಯಲ್ಲಿ ಕುಳಿತ ರಾಜ್ಯ ಸರ್ಕಾರದ ಇಂಧನ ಇಲಾಖೆಯ ಕಾರ್ಯದರ್ಶಿಯವರು ಖಚಿತವಾಗಿ ಹೇಳಿದರು.
`ಹಾಗೆ ಅಧ್ಯಯನ ಮಾಡುವ ಅಗತ್ಯವಿಲ್ಲ. ಸುಮ್ಮನೆ ಅದಕ್ಕೆ ಯಾಕೆ ಹಣ ಖರ್ಚು ಮಾಡುತ್ತೀರಿ…. ನಾವಂತೂ ತದಡಿಗೆ ಇಂಥ ಯಾವುದೇ ಯೋಜನೆ ಬರುವುದಕ್ಕೆ ಬಿಡುವುದಿಲ್ಲ’ ಎಂದು ತದಡಿಯಿಂದ ಬಂದಿದ್ದ ಹಿರಿಯರೊಬ್ಬರು ನಸುನಗುತ್ತ ನುಡಿದರು.

ಕೆನರಾ ಕ್ಷೇತ್ರದ ಸಂಸತ್ ಸದಸ್ಯ ಅನಂತಕುಮಾರ್ ಸಂಘಟಿಸಿದ್ದ ಈ ಸಭೆಯು ಅತ್ಯಂತ ಸೌಹಾರ್ದಯುತವಾಗಿ ನಡೆಯಿತೆಂದು ಮೇಲುನೋಟಕ್ಕೆ ಅನ್ನಿಸುತ್ತಿತ್ತು. ಆದರೆ ಉತ್ತರಕನ್ನಡದ ಜನರ ವರ್ತನೆಯೇ ಹಾಗೆ. ಆತಿಥ್ಯಕ್ಕೆ ಹೆಸರಾದ ಉತ್ತರಕನ್ನಡಿಗರು ಹೋರಾಟ ಮಾಡುವಾಗಲೂ ಒಂದು ಕೆಳಹಂತದಿಂದ ಶಾಂತಿಯುತವಾಗೇ ಆರಂಭಿಸುತ್ತಾರೆ. ಮಾತು ಸೌಮ್ಯ; ಪ್ರತಿಪಾದನೆಗಳೆಲ್ಲವೂ ಅತ್ಯಂತ ವಿನಯದಿಂದಲೇ ಮಂಡಿತವಾಗುತ್ತವೆ. ಆದರೆ ಅನಂತರ ನಡೆಯುವ ಹೋರಾಟಗಳು ಮಾತ್ರ ವ್ಯಾಪಕ ಮತ್ತು ತೀವ್ರಸ್ವರೂಪದ್ದೇ ಆಗಿರುತ್ತವೆ.
ನಾನು ಶಿರಸಿಯಲ್ಲಿದ್ದ ದಿನಗಳಲ್ಲೇ ಬೇಡ್ತಿ – ಅಘನಾಶಿನಿ ಯೋಜನೆಗಳ ವಿರುದ್ಧ ಬೃಹತ್ ಹೋರಾಟ ನಡೆಯಿತು. ಸ್ವರ್ಣವಲ್ಲೀ ಮಠದ ಸ್ವಾಮಿಗಳ ನೇತೃತ್ವದಲ್ಲಿ ನಡೆಸಿದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ನನಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಜನರೂ ಪಕ್ಷ, ಜಾತಿ, ಪಂಥ – ಎಲ್ಲವನ್ನೂ ಮರೆತು ಹೋರಾಟ ಮಾಡುತ್ತಾರೆ ಎಂಬ ಮಾತು ನನ್ನ ಅನುಭವಕ್ಕೆ ಬಂತು.
ಈಗ ಉತ್ತರ ಕನ್ನಡ ಜಿಲ್ಲೆಯ ತದಡಿಯಲ್ಲಿ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ (ಯು ಎಂ ಪಿ ಪಿ) ಬರುತ್ತಿದೆ. ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುವ ಎಲ್ಲರಿಗೂ ತದಡಿ ಯೋಜನೆಯು ಒಂದು ಪಕ್ಕಾ ಸಾಕ್ಷ್ಯವಾಗಲಿದೆ. ತದಡಿ ಬಂದರು ಅಭಿವೃದ್ಧಿಗೆಂದು ಸರ್ಕಾರವು ವಶಪಡಿಸಿಕೊಂಡ ಜಾಗವೇ ಈಗ ಈ ಆಮದಿತ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಕ್ಕಾಗಿ (ಶಾಖೋತ್ಪನ್ನ ವಿದ್ಯುತ್) ಬಳಕೆಯಾಗಲಿದೆ. ಕೇಂದ್ರ ಸರ್ಕಾರವು ಹಮ್ಮಿಕೊಂಡ ಏಳು ಯು ಎಂ ಪಿ ಪಿ ಗಳಲ್ಲಿ ತದಡಿಯೂ ಒಂದು. ಈ ಏಳೂ ಯೋಜನೆಗಳೂ ಒಂದೋ, ಕಲ್ಲಿದ್ದಲು ಸಿಗುವ ಪ್ರದೇಶದಲ್ಲೇ ಸ್ಥಾಪನೆಯಾಗಬೇಕು, ಅಥವಾ ಬಂದರಿನ ಬದಿಯಲ್ಲಿ ಸ್ಥಾಪನೆಯಾಗಬೇಕು ಎನ್ನುವುದು ಈ ಯೋಜನೆಯ ನೀತಿಯಲ್ಲಿ ಅಡಕವಾಗಿರುವ ಮುಖ್ಯ ಅಂಶ. ಆದ್ದರಿಂದ ತದಡಿಗೆ ವಕ್ಕರಿಸಿದ ಈ ಯೋಜನೆಯು ಬಿಜಾಪುರಕ್ಕೋ, ಇನ್ನಾವುದೋ ಒಳನಾಡಿನ ಸ್ಥಳಕ್ಕೋ ವರ್ಗಾವಣೆಯಾಗುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನ.
ಇಷ್ಟು ದಿನ ಉತ್ತರ ಕನ್ನಡಿಗರು ನಡೆಸಿದ ಹೋರಾಟಗಳೆಲ್ಲ ಮಿಶ್ರಫಲ ಕಂಡಿವೆ. ಕೈಗಾ ಸ್ಥಾವರ ನೆಲೆಯೂರಿದೆ. ಕದ್ರಾ, ಕೊಡಸಳ್ಳಿ ಅಣೆಕಟ್ಟುಗಳು ಮೇಲೆದ್ದಿವೆ. ಅಪ್ಪಿಕೋ ಚಳವಳಿಯಲ್ಲಿದ್ದ ಕೆಲವರು ಪರಿಸರವನ್ನೇ ಬಂಡವಾಳವಾಗಿಸಿಕೊಂಡು ವಿದೇಶಿ ನಿಧಿಗಳನ್ನು ಅರಸಿಕೊಂಡಿದ್ದಾರೆ. ಪರಿಸರ ಹೋರಾಟದ ಪ್ರತಿನಿಧಿಯಾಗಿ ರಾಜಕೀಯ ಪ್ರಯೋಗಕ್ಕೂ ಮುಂದಾಗಿದ್ದ ಡಾ. ಶಿವರಾಮ ಕಾರಂತರು ಈಗಿಲ್ಲ. ಉತ್ತರ ಕನ್ನಡ ಜಿಲ್ಲೆಯವರೇ ಆದ ಪರಿಸರ – ವಿಜ್ಞಾನ ಪತ್ರಕರ್ತ ನಾಗೇಶ ಹೆಗಡೆಯವರು ಈಗ ಮುಖ್ಯವಾಹಿನಿ ಪತ್ರಿಕೋದ್ಯಮದಿಂದ ದೂರವಾಗಿಯೂ ನಮ್ಮ ನಡುವಿನ ತೋರುದೀಪವಾಗಿದ್ದಾರೆ; ಕಾಡು ಉಳಿಸುವ, ಬೆಳೆಸುವ ಹಲವು ಓವರ್‌ಸೀಸ್ ಯೋಜನೆಗಳು ಬಂದು, ಅದರ ಅನುದಾನಗಳೆಲ್ಲ ಬಹುಪಾಲು ಮುಗಿದುಹೋಗಿವೆ.
ಇಡೀ ರಾಜ್ಯಕ್ಕೇ ವಿದ್ಯುತ್ ಕೊಡುತ್ತ ದಶಕಗಳ ಕಾಲ ನರಳಿದ ಉತ್ತರ ಕನ್ನಡ ಈಗ ಕಲ್ಲಿದ್ದಲು ವಿದ್ಯುತ್ ಯೋಜನೆ ಮತ್ತು ಆ ಮೂಲಕ ವಿಶ್ವದ ದೊಡ್ಡ ಬಂದರು ನಿರ್ಮಾಣದ ಯೋಜನೆಯ ಮೂಲಕ ಮತ್ತೆ `ತ್ಯಾಗ’ ಮತ್ತು `ಬಲಿದಾನ’ ಮಾಡಲು ಸಿದ್ಧವಾಗಬೇಕಿದೆ. ವಿಶ್ವದ ಪರಿಸರ ಬಿಸಿತಾಣ (ಎಕಲಾಜಿಕಲ್ ಹಾಟ್‌ಸ್ಪಾಟ್)ವಾದ ಪಶ್ಚಿಮಘಟ್ಟಕ್ಕೆ ಕಲ್ಲಿದ್ದಲಿನ ಬಾಂಬ್ ಬೀಳಲಿದೆ. ತಪ್ಪಿಸಿಕೊಳ್ಳಬೇಕಾದ್ದು, ನಾವು – ನೀವಲ್ಲ; ಇಷ್ಟು ಕೋಟಿ ವರ್ಷ ವೈವಿಧ್ಯಮಯ ಜಲಚರಗಳನ್ನು,  ಅಸಂಖ್ಯ ಪಶು-ಪಕ್ಷಿ-ಪ್ರಾಣಿಗಳನ್ನು ರೂಪಿಸಿ ಬೆಳೆಸಿದ, ಕಟುಕ ಹೃದಯದ ಮಾನವನ ಶ್ವಾಸಕೋಶಗಳಿಗೆ ಜೀವಾನಿಲ ಹೊಯ್ಯುತ್ತ ಬಂದ ವಸುಂಧರೆ.
ಈ ಮಾತೆಲ್ಲ ಉತ್ಪ್ರೇಕ್ಷೆಯವು; ಇಲ್ಲಿ ವಿಶೇಷಣಗಳೇ ಹೆಚ್ಚು ಎಂದು ನೀವು ಯಾರಾದರೂ ಭಾವಿಸಿದರೆ, ಕ್ಷಮಿಸಿ; ಈ ಯೋಜನೆಯು ಜಾರಿಯಾಗುವುದು ಬಹುತೇಕ ಖಚಿತ ಎಂಬುದಕ್ಕೆ ನಾನು ಸಂಗ್ರಹಿಸಿರುವ ಮಾಹಿತಿಗಳನ್ನು ಒಂದು ಅಂಕಣದಲ್ಲಿ ಹಿಡಿದಿಡಲು ನನಗೆ ಸಾಧ್ಯವಾಗುತ್ತಿಲ್ಲ. `ಉದಯವಾಣಿ’ಯ ಸಾಪ್ತಾಹಿಕದಲ್ಲಿ ಬಂದ ಲೇಖನವನ್ನೂ ನೀವು ಬಹುಶಃ ಓದಿರಬಹುದು.
ತದಡಿಗೆ ಬರಲಿರುವ ವಿದ್ಯುತ್ ಯೋಜನೆ ಮತ್ತು ಬಂದರು ಯೋಜನೆಯ ಅವಳಿ ಅಪಾಯಗಳು ಕೇವಲ ತದಡಿಯ ಕೆಲವು ಸಾವಿರ ಜನರಿಗೆ ಮತ್ತು ಅವರು ಪ್ರೀತಿಸುವ ಪರಿಸರ, ನದಿ, ಜಲಜೀವಿಗಳಿಗೆ ಮಾತ್ರ ತಟ್ಟುತ್ತವೆ ಎಂಬ ಹಗುರ ಭಾವ ಒಂದು ಅಪರಾಧವೇ ಸರಿ. ಇಡೀ ಪಶ್ಚಿಮಘಟ್ಟದ ಮಣಿಕಟ್ಟನ್ನು ಕೊಯ್ಯುವ, ವಿಷತ್ಯಾಜ್ಯಗಳ ಪರಮ ಮಿಶ್ರಣವಾಗಿರುವ ಕಲ್ಲಿದ್ದಲಿನ ಮೂಲಕ ಇಡೀ ಪರಿಸರವನ್ನು ಹುಗಿದುಹಾಕುವ, ಅಭಿವೃದ್ಧಿ ಮತ್ತು ಅನಿವಾರ್ಯತೆಯ ಹೆಸರಿನಲ್ಲಿ ಸಿಕ್ಕ ಗೇಣುದ್ದ ಜಾಗದಲ್ಲಿ ಅಪಘಾತದ ಸುರಿಹೊಂಡ ತೆಗೆಯುವ, ತ್ಯಾಗ-ಬಲಿದಾನದ ಹೆಸರಿನಲ್ಲಿ ಮತ್ತೆ ಮತ್ತೆ ಉತ್ತರ ಕನ್ನಡದ ಜನರ ಜೀವಕ್ಕೇ ಎರವಾಗುವ ಈ ಯೋಜನೆಗಳು ಜಾಗತಿಕ ವ್ಯಾಪ್ತಿಯವು ; ಇಡೀ ಭೂಗೋಳದಲ್ಲೇ ಸದ್ಯ ನಡೆಯಬಹುದಾದ ಒಂದು ಬಹುಸ್ಫೋಟದ ದುರಂತ.
ರಾಜ್ಯದ ವಿದ್ಯುತ್ ಉತ್ಪಾದನೆಯನ್ನು ಇಮ್ಮಡಿ ಮಾಡುವ ರಾಜ್ಯ ಬಿಜೆಪಿಯ ಪ್ರಣಾಳಿಕೆಯನ್ನು ಒಮ್ಮೆ ತೆಗೆದು ನೋಡಿ. ಆದರೆ ಈ ಭರವಸೆಗಳನ್ನು ಈ ರೀತಿ ವಿಕೃತವಾಗಿ ಜಾರಿ ಮಾಡುತ್ತಾರೆ ಎಂಬ ಕೆಡುಗನಸು ಯಾರಿಗೆ ಬಿದ್ದಿತ್ತು? ಬೆಂಗಳೂರಿಗಾಗಿ, ಬೆಂಗಳೂರಿನ ಹತ್ತಿರವೇ ಒಂದು ವಿದ್ಯುತ್ ಘಟಕವನ್ನು ಸ್ಥಾಪಿಸುವ ಭರವಸೆಯೂ ಅದರಲ್ಲಿದೆ. ಛತ್ತೀಸಗಢದಲ್ಲೇ ವಿದ್ಯುತ್ ಉತ್ಪಾದಿಸಿ ತರುವ `ಜಾಣ’ ಯೋಜನೆಯ ಒಡಂಬಡಿಕೆಗೆ ಈಗಾಗಲೇ ಸಹಿ ಹಾಕಲಾಗಿದೆ. ಇದಂತೂ ಪರಿಸರ ಸಮಸ್ಯೆಯಾದರೆ ಅದು ಛತ್ತೀಸಗಢದ ಜನತೆಗೆ; ನಮಗಲ್ಲ ಎಂಬ – ವಿಶ್ವಸಮಷ್ಟಿಯನ್ನು ಮರೆತ – ಪರಾರಿ ಚಿಂತನೆ! ಸದ್ಯ, ನಾವೆಲ್ಲ ಈ ಹಿಂದಿನಂತೆ ತದಡಿ ಹೋರಾಟದಲ್ಲೇ ಇದ್ದೇವೆ ಎಂಬ ಸಂಕೇತವನ್ನು ಜಿಲ್ಲೆಯ ಬಿಜೆಪಿ ನಾಯಕರೂ ಸೇರಿದಂತೆ ಎಲ್ಲರೂ ವ್ಯಕ್ತಪಡಿಸಿರುವುದೊಂದೇ ಸಮಾಧಾನದ ಸಂಗತಿ.
ಕಲ್ಲಿದ್ದಲು, ಕಾರ್ಬನ್ ಡಯಾಕ್ಸೈಡ್ ಅನಿಲ ತ್ಯಾಜ್ಯ ಸಮಸ್ಯೆ, ಗಂಧಕಯುಕ್ತ ವಿಷತ್ಯಾಜ್ಯಗಳು, ಜನಜೀವನ, ಸಂಸ್ಕೃತಿ – ಪರಂಪರೆ ನಾಶ, ವಿಶ್ವದ ಜೀವಸೂಕ್ಷ್ಮ ಪರಿಸರ ಪಟ್ಟಿಯ ಕೊಯ್ತ, ನಗರೀಕರಣಕ್ಕಾಗಿ ಹಳ್ಳಿಗಳ ದಮನ, – ಇಷ್ಟೆಲ್ಲ ಸಾಲುಸಾಲು ಸಮಸ್ಯೆಗಳನ್ನು ಹೊತ್ತುಕೊಂಡು ತದಡಿಗೆ ದಾಪುಗಾಲಿಡುತ್ತಿರುವ ಈ ಯೋಜನೆಗಳನ್ನು ಮೆಟ್ಟಿ ನಿಲ್ಲುವ ಛಾತಿಯನ್ನು ಈ ಯೋಜನೆವಿರೋಧಿ ಹೋರಾಟವು ರೂಢಿಸಿಕೊಳ್ಳಬೇಕಿದೆ. ಅಗ್ಗದ ರಾಜಕೀಯ ನಿಲುವುಗಳಿಗೆ ರಜೆ ಕೊಟ್ಟು ಬಗ್ಗದ ಮನೋಭಾವ ಬೆಳೆಸಿಕೊಳ್ಳಬೇಕಿದೆ.
ವಸುಂಧರೆಯ ಮಡಿಲಿನಲ್ಲಿ ಹೋರಾಟದ ಹಸಿರುಬೆಂಕಿ ಹತ್ತಿ ಉರಿಯುವ ಅನಿವಾರ್ಯತೆ ಈಗ ಒದಗಿದೆ.

Leave a Reply

Theme by Anders Norén