ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

The policy of my column

ನನ್ನ ಅಂಕಣದ ನೀತಿ: ನೀವೇ ನಿರೂಪಿಸಿ ಮಾರಾಯ್ರೆ… !

ನಿಮಗೆ ಬೇಸರವಾಗಿದೆ. ನಿಮ್ಮೂರಿಗೆ ಹೋಗುವ ಬಸ್ಸಿಗಾಗಿ ಕಾದು ಕುಳಿತಿದ್ದೀರಿ; ನಿಂತಿದ್ದೀರಿ; ಶಥಪಥ ಹಾಕುತ್ತಿದ್ದೀರಿ.  ಬೀಡಿಯನ್ನೋ ಸಿಗರೇಟನ್ನೋ ಎಳೆಯುತ್ತ ದೃಷ್ಟಿ ಹಾಯಿಸಿದ್ದೀರಿ. ಬಸ್ಸುಗಳು ಹಾಗೆ ಬಂದು ಹೀಗೆ ತಿರುಗಿದ ಕೂಡಲೇ ಬೋರ್ಡು ನೋಡುತ್ತೀರಿ. ಆ ಬಸ್ಸು ನಿಮ್ಮ ಊರಿಗೆ ಹೋಗುವುದಿಲ್ಲ. ನಿಮ್ಮೂರಿನ ಬಸ್ಸು ಬರುವ ಬಗ್ಗೆ ಕಂಟ್ರೋಲರ್ ಏನೂ ಹೇಳುತ್ತಿಲ್ಲ. ಬರಬಹುದು; ಬರದೇ ಇರಬಹುದು.
ನಿಮ್ಮ ಬದುಕು ಆ ರಾತ್ರಿ ಎಷ್ಟು ಅನಿಶ್ಚಿತವಾಗಿದೆ ಎಂದರೆ ಬೆಳಗ್ಗೆ ನೀವು ಗಮ್ಯ ತಲುಪುವ ಬಗ್ಗೆ ಅನುಮಾನಗಳು ದಟ್ಟವಾಗಿವೆ.`  ಚಾ ಕಾಫಿ ಯಾರು ಈ ಕಡೆ ಬರ್ರಿ' ಎಂದು ಜಬರ್ದಸ್ತಾಗಿ ಕರೆಯುವ ಯಜಮಾನನ ದನಿ ಕೇಳಿ ನಿಮ್ಮ ಬೇಸರ ಹೆಚ್ಚುತ್ತಿದೆ. ಅಲ್ಲೇ ಇರುವ ಮ್ಯಾಗಜಿನ್ ಅಂಗಡಿಯಲ್ಲಿ ಕಂಡ ಎಲ್ಲ ಮುಖಪುಟಗಳನ್ನೂ ಬಾಯಿಪಾಠ ಮಾಡುತ್ತೀರಿ. ಹಣ್ಣಿನ ಅಂಗಡಿಯವನು ನಿಧಾನವಾಗಿ ಬಾಗಿಲು ಮುಚ್ಚುತ್ತಾನೆ. ಯಾರೋ ಎದ್ದು ಸರಸರ ತಮ್ಮ ಬಸ್ಸಿನತ್ತ ನಡೆಯುತ್ತಾರೆ. ಇನ್ನಾರೋ ಪೇದೆ ಬಂದು ಯಾರನ್ನೋ ಗದರಿಸುತ್ತ ನಿಂತಿರುತ್ತಾನೆ.
ಹೌದ್ರೀ.. ಮುಂದೆ ಹೇಳ್ರಿ ಎಂದು ನೀವು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತೀರಿ. ದೃಶ್ಯಗಳನ್ನುಕಟ್ಟಿಕೊಡುತ್ತ ಯಾವುದೋ ಭಾವವನ್ನು ನಿಮ್ಮೊಳಗೆ ಸ್ಫುರಿಸುತ್ತ ಕೂಡ್ರುವುದು ಅಷ್ಟೇನೂ ಕಷ್ಟದ ಕೆಲಸವಲ್ಲ.  ಆದರೆ ಈ ಭಾವನೆಗಳು ಮುಗಿದ ಮೇಲೆ ಮಾಡುವುದೇನು ಎಂಬುದೇ ಮುಖ್ಯ ಪ್ರಶ್ನೆ. ನಿಮ್ಮನ್ನು ಕಾಡುವ ಭಾವನೆಗಳನ್ನು ಮತ್ತಷ್ಟು ಪ್ರಚೋದಿಸಿ ಯಾವುದೋ ತೀರದೆಡೆಗೆ ನಿಮ್ಮನ್ನು ಒಯ್ದು ಕಣ್ಣನ್ನು ತೇವಗೊಳಿಸಿ ಅರೆ… ಈ ಪೇಪರ್ ಮಂಜಾಗಿದೆಯಲ್ಲ ಎಂದು ನೀವು ಸಾವರಿಸಿಕೊಳ್ಳುವ ದೃಶ್ಯವನ್ನು ಕಲ್ಪಿಸಿಕೊಳ್ಳಲು ನನಗೂ ಇಷ್ಟ. ಆದರೆ ಯಾಕೋ ಇದೆಲ್ಲ ಕೊಂಚ ಕಷ್ಟ……
ಇನ್ನು ಸಾಮಾಜಿಕ ಸಮಸ್ಯೆಗಳನ್ನು ಹೇಳಿ, ಸಾಂದರ್ಭಿಕವಾಗಿ ಎದುರಾಗುವ ರಾಷ್ಟ್ರಪತಿ ಚುನಾವಣೆ, ಮಹಿಳಾ ಮೀಸಲಾತಿ, ಸಿ ಇ ಟಿ ಗೊಂದಲ, ಇತ್ಯಾದಿ ಸಂಗತಿಗಳನ್ನು ಐತಿಹಾಸಿಕವಾಗಿ ಚರ್ಚಿಸಿ  ಅವಕ್ಕೊಂದು ಪರಿಹಾರವನ್ನು  ಘೋಷಿಸುವುದು ಕೂಡಾ ನನಗೆ ಸಾಧ್ಯವಿರಬಹುದು. ಆದರೆ ಇದರಿಂದ ಅಂಥ ಪರಿಣಾಮವೇನೂ ಆಗುವುದಿಲ್ಲ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಾರೋ, ಇಲ್ಲವೋ, ಅವರು ಗುಣ ಅವಗುಣಗಳೇನು ಎಂದು ಚರ್ಚಿಸಿ, ಕುಮಾರಸ್ವಾಮಿಯವರು ಯಾಕೆ ಹೀಗಿದ್ದಾರೆ, ಅವರು ಹ್ಯಾಗೆ ತಮ್ಮ ವರ್ತನೆಗಳನ್ನು ಬದಲಿಸಿಕೊಳ್ಳಬಹುದು ಎಂದು ಅವಲೋಕಿಸುವುದೂ ಅಂಥ ದೊಡ್ಡ ಸಮಸ್ಯೆಯಲ್ಲ.  ಆದರೆ ಹೀಗೆ ಮುಖ್ಯಮಂತ್ರಿಗಳು ಬದಲಾದ ಮಾತ್ರಕ್ಕೆ  ರಾಜ್ಯದಲ್ಲಿ ಯಾವುದಾದರೂ ಮೌಲಿಕ, ವಾಸ್ತವಿಕ ಬೆಳವಣಿಗೆ, ಅಭಿವೃದ್ಧಿ ಆಗಿದೆಯೆ ಎಂಬುದನ್ನು ಲೆಕ್ಕ ಹಾಕಲು ನನಗೆ ಬರುವುದಿಲ್ಲ. ಕಾಲಂ ತುಂಬುತ್ತದೆಯೇ ಹೊರತು ಜನರ ಕಿಸೆಯೇನೂ ಭರ್ತಿಯಾಗುವುದಿಲ್ಲ.
ಹಾಗಾದರೆ ಈ ಕಾಲಂ ಬರೆದು ನಾನು ಸಾಧಿಸುವುದಾದರೂ ಏನು? ಅಥವಾ ನನಗೆ ಏನು ಸಾಧಿಸುವುದಕ್ಕೆ ಬರುತ್ತದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಯಾಕೆಂದರೆ ನನಗೆ  ಪಿ.ಸಾಯಿನಾಥ್ ಇರಲಿ, ಕರ್ನಾಟಕದ ಫ್ರೀಲ್ಯಾನ್ಸಿ ಪತ್ರಕರ್ತರ ಹಾಗೆ ಹಳ್ಳಿಗಳಲ್ಲಿ ಅಲೆದಾಡಿದ ಅನುಭವವೂ ಇಲ್ಲ. ವಿಧಾನಸೌಧದಲ್ಲಿ ಅಲೆದಾಡಿ, ಅಲ್ಲಿನ ಮೊಗಸಾಲೆಗಳು ಹೇಳುವ ನೂರಾರು ಕಥೆಗಳು ನನ್ನೊಳಗಿಲ್ಲ.  ನೂರಾರು ಗ್ರಂಥಗಳ ಹಿನ್ನೆಲೆಯಲ್ಲಿ ಯಾವುದೋ ವಾದವನ್ನು ಪ್ರತಿಪಾದಿಸಿ ನಿಮ್ಮೆದುರು ಬೀಗುವುದಕ್ಕೆ ನನಗೆ ಖಂಡಿತ ಆಗದು.
ಆದ್ದರಿಂದ ನಾನು ನನ್ನ ಅಂಕಣದಲ್ಲಿ ಇಂಥ ವಿಷಯಗಳನ್ನು ಹೇಳಬೇಕು ಅಥವಾ ಹೇಳಬಾರದು ಎಂದುಕೊಂಡಿದ್ದೇನೆ:
೧) ಯಾವುದೇ ರಾಜಕೀಯ ವಿಮರ್ಶೆ, ಪಕ್ಷಗಳ ಬಲಾಬಲ, ಸಾಂದರ್ಭಿಕ ಬೆಳವಣಿಗೆಯೊಂದರ ತರ್ಕ – ಇಂಥ ಮಾಹಿತಿಗಳು ನನ್ನ ಅಂಕಣದಲ್ಲಿ ಇರುವುದಿಲ್ಲ.
೨) ನಾನು ಯಾವುದೇ ಇಸಂಗಳನ್ನು ಪ್ರತಿಪಾದಿಸುವ ಅಥವಾ ವಿರೋಧಿಸುವ ವಾದಗಳನ್ನು ಮಂಡಿಸುವುದಿಲ್ಲ. ಆದರೆ ನನ್ನ ಅನುಭವ, ಅಧ್ಯಯನದ ಮಟ್ಟಿಗೆ ಸರಿ ಎಂದು ಅನ್ನಿಸಿದ್ದನ್ನು ಮಾತ್ರ ನಿಶ್ಚಿತವಾಗಿ ಹೇಳುವೆ.
೩) ಬದುಕಿನಲ್ಲಿ ಬಳಕೆಗೆ ಬೇಕಾದ ಮಾಹಿತಿಗಳನ್ನು ಸಾಮಾಜಿಕ ಹಿನ್ನೆಲೆಯಲ್ಲಿ ವಿವರಿಸುವುದಕ್ಕೆ ನಾನು ಆದ್ಯತೆ ನೀಡುವೆ. ಜನರಿಗೆ ಭಾವನೆಗಳಿಗಿಂತ ಬದುಕುವುದು ಮುಖ್ಯ;  ಅದರಲ್ಲೂ ನಮ್ಮ ಯುವಪೀಳಿಗೆಯು ಬಾಲಿವುಡ್ಡಿನಲ್ಲಿ ಮೈಮರೆಯುವುದಕ್ಕಿಂತ ಬದುಕಿನ ಕಟುಸತ್ಯಗಳ ಬಗ್ಗೆ ಅರಿತುಕೊಳ್ಳುವುದು ಮುಖ್ಯ ಎಂಬುದು ನನ್ನ ನಿಲುವು.
೪) ನನ್ನ ಅಂಕಣಗಳ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದವರಿಗೆ ಮಾಹಿತಿಯನ್ನು ಮುಕ್ತವಾಗಿ ಮತ್ತು ಸಂಪೂರ್ಣವಾಗಿ ನೀಡುವುದು ನನ್ನ ಕರ್ತವ್ಯ ಎಂದು ಭಾವಿಸುತ್ತೇನೆ. ಮುಕ್ತಮಾಹಿತಿ ನೀಡುವ ನನ್ನ ವೈಯಕ್ತಿಕ ನಿಲುವನ್ನು ಈ ಅಂಕಣದಲ್ಲೂ ಮುಂದುವರೆಸಬಯಸುತ್ತೇನೆ.
೫) ನಾನು ನನ್ನ ಸಂಸ್ಕೃತಿ ಪರಂಪರೆಯನ್ನು, ನಮ್ಮ ಸಿಂಧೂ ನಾಗರಿಕತೆಯ ಕುರುಹುಗಳನ್ನು ನನ್ನ ಹಿರಿಯರು ನೀಡಿದ ಬಹುಮುಖ್ಯ ಬಳುವಳಿ ಎಂದು ತಿಳಿದಿದ್ದೇನೆ. ಈ ವಿಷಯದ ಬಗ್ಗೆ ಯಾವುದೇ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ,
೬) ನಾನು ಉದಯವಾಣಿ ಪತ್ರಿಕೆಯ ಓದುಗರು ಬಯಸುವ ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿ ಬರೆಯುವುದಕ್ಕೂ ಸಿದ್ಧನಿದ್ದೇನೆ. `ಭಾಗೇದಾರಿ ಪತ್ರಿಕೋದ್ಯಮ` (ಪಾರ್ಟಿಸಿಪೇಟರಿ ಜರ್ನಲಿಸಮ್)ನಲ್ಲಿ ನಾನು ನಂಬಿಕೆಯನ್ನು ಇಟ್ಟಿದ್ದೇನೆ.
೭) ನನ್ನ ಅನುಭವವನ್ನು ಮೀರಿದ ಸಂಗತಿಗಳನ್ನು ಬರೆಯುವಾಗ ಆದಷ್ಟೂ ವಾಸ್ತವಿಕವಾಗಿ ಬಿಂಬಿಸುವೆ.
೮) ನನ್ನ ಅಂಕಣಗಳಲ್ಲಿ `ನಾನು' ಎಂಬುದು ಕನಿಷ್ಠ ಪ್ರಮಾಣದಲ್ಲಿ ಇರುವಂತೆ ಪ್ರಯತ್ನಿಸುವೆ.
೯) ಅಂಕಣವೆಂದರೆ ಜನಾಭಿಪ್ರಾಯ ಮೂಡಿಸುವ ಸಾಧನವೂ ಹೌದು; ಆದರೆ ಒಂದು ವ ಇಷಯದ ಮೇಲೆ ತರ್ಕವನ್ನೇ ತಾರ್ಕಿಕತೆಗಿಂತ ಮಾಹಿತಿಯೇ ಇಂಥ ಅಭಿಮತ ಹುಟ್ಟುಹಾಕಬೇಕು ಎಂಬುದು ನನ್ನ ನಿಲುವು.
ಇದಿಷ್ಟು ನನ್ನ ಅಂಕಣದ ಕುರಿತಂತೆ ನಾನು ಹೇಳಲೇಬೇಕು ಎಂದು ಪಟ್ಟಿ ಮಾಡಿದ್ದಲ್ಲ, ಬದಲಿಗೆ ನನ್ನ  ಇನ್‌ಸ್ಟಂಟ್ ಭಾವಗಳು. ಇನ್‌ಸ್ಟಂಟ್ ಆಗಿ ವರ್ತಿಸುವುದರಿಂದ ಹಲವು ಲಾಭಗಳೂ ಇವೆ; (ಅಪಾಯಗಳಂತೂ ಇದ್ದೇ ಇವೆ).  ಸಾರ್ವಜನಿಕ ಸಂಗತಿಗಳ ಬಗ್ಗೆ ಅನಿಸುವ ಭಾವನೆಗಳನ್ನು ಕೂಡಲೇ ನಿಮ್ಮ ಸುಮಾರಿನ ಅನುಭವದ ಹಿನ್ನೆಲೆಯಲ್ಲಿ ಹೇಳಿಬಿಡುವುದು ವಾಸಿ.
ಉದಾಹರಣೆಗೆ ನಾನು ಇತ್ತೀಚೆಗೆ ಓದಿದ ಹಲವು ಪುಸ್ತಕಗಳ ಹಿನ್ನೆಲೆಯಲ್ಲಿ ನನ್ನದೇ ಆದ ವಿಚಾರಗಳನ್ನು ಹೇಳಬಹುದು. ಈ ಪುಸ್ತಕಗಳ ಬಗ್ಗೆ ಬರೆಯುವಾಗ ನಾನು ಭಾವುಕನಾಗುವ ಸಾಧ್ಯತೆಗಳೂ ಇವೆ. ಆದರೆ ಪುಸ್ತಕದ ವಿಷಯಗಳನ್ನು ಓದುಗರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಕ್ಷಣದವರೆಗೆ ಈ ಭಾವುಕತೆಗೆ ಬೆಲೆ ಇದೆ ಎಂಬುದು ನನ್ನ ಅನಿಸಿಕೆ.
ಬೇಕಾದಷ್ಟು ಥಿಯರಿ ಹೇಳಿದ್ದೀರಲ್ಲ… ಬರೆಯುವುದು ಯಾವಾಗ ಎಂದು ನೀವು ಕೇಳಬಹುದು. ನಾನು ಬರೆದದ್ದನ್ನು ಇಲ್ಲಿಯವರೆಗೆ ಓದುವ ದೊಡ್ಡ ಮನಸ್ಸು ಮಾಡಿದ ನಿಮ್ಮ ಆರಂಭಿಕ ಅಭಿಮಾನವನ್ನು ಹೀಗೆಯೇ ಬಿಡಲಾದೀತೆ? ಮುಂದಿನ ವಾರ ಖಂಡಿತ  ವರ್ತಮಾನದ ಹೊಸ ವಾರ್ತೆಯೊಂದಿಗೆ ಸಿಗುತ್ತೇನೆ.  

Leave a Reply

Theme by Anders Norén