ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

Will there be a new era in Kannada Publication?

ಪುಸ್ತಕ ಪ್ರಕಟಣೆಯ ಹೊಸ ಚಹರೆಗಳಿಗೆ ಇನ್ನೆಷ್ಟು ಕಾಯಬೇಕೋ…..


ಪುಸ್ತಕ ಪ್ರಕಟಣೆಯ ಹೊಸ ಚಹರೆಗಳಿಗೆ ಇನ್ನೆಷ್ಟು ಕಾಯಬೇಕೋ…..
ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕ – ೧ ಬಂದಾಗ ಅದೊಂದು ವಿಶಿಷ್ಟ ಅನುಭವೇ ಆಗಿತ್ತು. ಗ್ರಾಫಿಕ್ ನಾವೆಲ್‌ನ ಎಲ್ಲ ಚಹರೆಗಳನ್ನು ಹೊತ್ತು ಬಂದಿದ್ದ ಮಾಯಾಲೋಕದ ಮುಂದಿನ ಕಂತು ಬರುವ ಮುನ್ನವೇ ತೇಜಸ್ವಿ ಮಾಯಾಲೋಕಕ್ಕೆ ತೆರಳಿದ್ದು ಕನ್ನಡ ಸಾಹಿತ್ಯದ ಪ್ರಕಟಣೆಯ ಹೊಸ ಚಹರೆಗಳಿಗೆ ಮೋಡ ಕವಿದಂತಾಗಿದೆ ಎನ್ನಬಹುದೆ?
ಇತ್ತೀಚೆಗಷ್ಟೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸುವರ್ಣ ಸಾಹಿತ್ಯದ ಭಾಗವಾಗಿ ನೂರು ಪುಸ್ತಕಗಳು ಪ್ರಕಟವಾಗಿವೆ. ಇವುಗಳಲ್ಲಿ ಹಳೆಯ ಶ್ರೇಷ್ಠ ಕೃತಿಗಳೊಂದಿಗೆ ಸುವರ್ಣ ಕರ್ನಾಟಕದಲ್ಲಿ ಪ್ರಕಟವಾದ ಕಥೆ, ಕಾವ್ಯ, ಲಲಿತಪ್ರಬಂಧ, ವಿಮರ್ಶೆ, ವಿeನ ಲೇಖನಗಳು – ಹೀಗೆ ಹೊಸ ಸಂಗ್ರಹಗಳೂ ಸೇರಿವೆ. ಅತಿ ಕಡಿಮೆ ಬೆಲೆಯಲ್ಲಿ ಎಟಕುವ ಈ ಪುಸ್ತಕಗಳನ್ನು ನೀವು ಸದರಿ ಇಲಾಖೆಗೆ ಅದರ ಕಚೇರಿ ವೇಳೆಯಲ್ಲಿ ಹೋಗಿ (ಊಟದ ವಿರಾಮದಲ್ಲಿ ಹೋದೀರಿ ಜೋಕೆ) ಖರೀದಿಸಬಹುದು. ಮೂರು ಸಾವಿರ ರೂಪಾಯಿಗಳಿಗೆ ಬರೋಬ್ಬರಿ ನೂರು ಪುಸ್ತಕಗಳು ನಿಮ್ಮದಾಗುತ್ತವೆ. ಇಪ್ಪತ್ತೈದು, ಮೂವತ್ತು, ಐವತ್ತು ರೂಪಾಯಿಗಳಿಗೆ ನಿಮ್ಮ ಆಯ್ಕೆಯ ಪುಸ್ತಕವೊಂದು ಸಿಕ್ಕೇ ಸಿಗುತ್ತದೆ.
ಆದರೆ ಪುಸ್ತಕ ಎಂದರೆ ಕೇವಲ ಪಠ್ಯ ಎಂದೇ ಇಲಾಖೆಗಳು ಭಾವಿಸಿವೆ. ಪುಸ್ತಕದ ಬೆಲೆ ಕಡಿಮೆ ಇದ್ದರೂ, ಅದರ ಪ್ರಕಟಣೆಗೆ ಕೊಟ್ಟ ಹಣವೇನೂ ಕಡಿಮೆಯಲ್ಲ. ಪುಸ್ತಕಗಳಿಗೆ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಹಾಕಬಹುದಿತ್ತು; ಕಥೆ, ಕಾವ್ಯ, ಪ್ರಬಂಧಗಳನ್ನು ಇನ್ನಷ್ಟು ಸುಂದರವಾಗಿ ನಿರೂಪಿಸಬಹುದಿತ್ತು. ಪುಸ್ತಕಪ್ರಿಯರು ಯಾವಾಗಲೂ ಪುಸ್ತಕದ ನವಿರನ್ನು ಅನುಭವಿಸುತ್ತಾರೆ. ಅದು ಸ್ಪರ್ಶದ ಮೂಲಕ, ವಾಸನೆಯ ಮೂಲಕ, ಅಕ್ಷರ ಮತ್ತು ರೇಖೆಗಳ ಮೂಲಕ ದಾಟಿ ಓದುಗರ ಎದೆ ತಟ್ಟುವ ಕ್ರಿಯೆ. ಅದಕ್ಕೇ `ದಿ ಹಿಂದೂ' ಪತ್ರಿಕೆಯ ಅಂಕಣಕಾರ ಪ್ರದೀಪ್ ಸೆಬಾಸ್ಟಿಯನ್ ತನ್ನ ಅಂಕಣದಲ್ಲಿ ಈ ಎಲ್ಲ ಸುಗಂಧಸಂಭ್ರಮವನ್ನು ಬಣ್ಣಿಸುತ್ತಾರೆ. ಈ ಅಂಕಣವೂ ಸೇರಿದಂತೆ ವಿಶ್ವದ ಮೂಲೆ ಮೂಲೆಗಳಿಂದ ಬರುವ ಪುಸ್ತಕಸುದ್ದಿಗಳ ಸಂಚಿಕೆ `ಲಿಟರರಿ ಸಪ್ಲಿಮೆಂಟ್' ದಿ ಹಿಂದೂ ಪತ್ರಿಕೆಯಲ್ಲಿ ಅರು ವಾರಗಳಿಗೊಮ್ಮೆ ಪ್ರಕಟವಾಗುತ್ತದೆ.
ಸುವರ್ಣ ಸಾಹಿತ್ಯದ ಪ್ರಕಟಣೆಗಳು ಸ್ವಾಗತಾರ್ಹವೇ; ಆದರೆ ನವಿರಿನ ಬಗ್ಗೆ ಚೌಕಾಸಿ ಮಾಡಿಕೊಳ್ಳಬೇಕಷ್ಟೆ !
ಇಂದು ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರ ಸಂಖ್ಯೆಗಿಂತ ಅವರ ಪ್ರಕಟಣಾ ವೇಗ ಅಚ್ಚರಿ ಹುಟ್ಟಿಸುತ್ತದೆ. ಒಂದೆರಡು ವರ್ಷಗಳ ಹಿಂದೆ ಕೊಂಚ ನಿಧಾನವಾಗಿದ್ದ `ಅಂಕಿತ ಪುಸ್ತಕ'ದ ಪ್ರಕಟಣಾ ರಭಸ ಅಚ್ಚರಿ ಹುಟ್ಟಿಸಿದೆ; ನಿನ್ನೆ ಮೊನ್ನೆಯೆಂಬಂತೆ ಬಂದ ನಾರಾಯಣ ಮಾಳ್ಕೋಡರ `ಸುಮುಖ ಪ್ರಕಾಶನ'ವಂತೂ ಬೌಂಡರಿ, ಸಿಕ್ಸರ್ ಹೊಡೆಯುತ್ತಲೇ ಇದೆ. ಸಪ್ನಾ ಕೂಡಾ ಹಿಂದೆ ಬಿದ್ದಿಲ್ಲ. ಇನ್ನಷ್ಟು ಯುವ ಪ್ರಕಾಶಕರು ತಮ್ಮದೇ ಬ್ರಾಂಡ್ ರೂಪಿಸುತ್ತ ಹೊರಟಿದ್ದಾರೆ.
ಆದರೆ ಸರಿಸುಮಾರಾಗಿ ಎಲ್ಲ ಪ್ರಕಾಶಕರ ಪುಸ್ತಕಗಳದ್ದೂ ಒಂದೇ ಬಗೆಯ ವಿನ್ಯಾಸ : ಒಂದು ಒಳ್ಳೆಯ ಮುಖಪುಟ. ಒಳ್ಳೆಯ ಪಠ್ಯವಿನ್ಯಾಸ; ಶೀರ್ಷಿಕೆ ಪುಟಗಳಲ್ಲಿ ಶಿಸ್ತು. ಆದರೆ ಗ್ರಾಫಿಕಲ್ ನಿರೂಪಣೆ ಎಂದರೆ ಇದಲ್ಲವೇ ಅಲ್ಲ. `ಛಂದ ಪುಸ್ತಕ' ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಧರಿಗಾಗಿ ಬ್ರೇಲ್ ಲಿಪಿಯಲ್ಲಿ ಪುಸ್ತಕ ತಂದಿದ್ದು ಮಾತ್ರ ಕನ್ನಡ ಪ್ರಕಟಣಾ ಸಾಹಿತ್ಯದ ಒಂದು ಮಹತ್ವದ ಹುಚ್ಚು. ಅಲ್ಲಿ ಪಠ್ಯವೇ ಗ್ರಾಫಿಕಲ್ ಎಂದು ಬ್ರೇಲ್ ಲಿಪಿಯನ್ನು ಓದಲಾಗದ ನಮ್ಮಂಥ ಅಂಧರಿಗೆ ಅನ್ನಿಸುವುದೂ ಇದೆ. 'ಅಂಕಿತ ಪುಸ್ತಕ'ವು ಇತ್ತೀಚೆಗೆ ಹಾರ್ಡ್‌ಬೌಂಡ್ ಪುಸ್ತಕಗಳನ್ನು ಪ್ರಕಟಿಸುತ್ತಿರುವುದು ಒಂದು ಹೊಸ ಸ್ವಾಗತಾರ್ಹ ಬೆಳವಣಿಗೆ.
ಗ್ರಾಫಿಕಲ್ ಪ್ರೆಸೆಂಟೇಶನ್ ಎಂದರೆ ಓದುಗರ ಪುಸ್ತಕ ಓದುವ ಕ್ರಿಯೆಯ ಸೊಗಸನ್ನು ಹೆಚ್ಚಿಸುವುದರ ಜೊತೆಗೆ ಪುಸ್ತಕದ ಭೌತಿಕ ಚಹರೆಯನ್ನೂ ಹೊಸ ಕಾಲದ ಸಂದರ್ಭಗಳಿಗೆ ತಕ್ಕಂತೆ ರೂಪಾಂತರಿಸುವುದು. ಅದಕ್ಕೇ ನಾನು ಮಾಯಾಲೋಕದ ಉದಾಹರಣೆ ಕೊಟ್ಟಿದ್ದು. ಮಾಯಾಲೋಕವನ್ನು ಚಿತ್ರರಹಿತವಾಗಿ ಓದಿದರೂ ಅದೊಂದು ಗ್ರಾಫಿಕ್ ನಾವೆಲ್ಲೇ ಹೌದು. ತೇಜಸ್ವಿಯವರ ಬರವಣಿಗೆಯನ್ನು ನಮ್ಮ ಚಿತ್ತದಲ್ಲಿ ಚಿತ್ರೀಕರಿಸಿಕೊಳ್ಳಲು ನಾವು ಚಿತ್ರಗಳಿಗೆ ಮೊರೆ ಹೋಗಬೇಕಿಲ್ಲ. ಪಠ್ಯವೇ ಅಷ್ಟು ಸೊಗಸಾಗಿರುತ್ತದೆ. ಹೀಗಿದ್ದೂ ಅವರು ಪುಸ್ತಕದಲ್ಲಿ ಹೊಸ ಚಿತ್ರಗಳನ್ನು ಸೇರಿಸಿದರು; ಪುಸ್ತಕದ ಗಾತ್ರವನ್ನು, ಆಕಾರವನ್ನು ಬದಲಿಸಿದರು. ನೀವು ಮಾಯಾಲೋಕವನ್ನು ಶಿಸ್ತಿನಿಂದ ಕೂತು ಓದಲೇಬೇಕು ಎಂಬ ಅನಿವಾರ್ಯತೆಯನ್ನೂ ತಂದಿಟ್ಟರು.
ನಿಜ; ಇಂಥ ಪ್ರಯೋಗಗಳಿಗೆ ಖರ್ಚಾಗುತ್ತದೆ. ನನ್ನ `ಸ್ಕಲ್ ಮಂತ್ರ' ಎಂಬ ಅನುವಾದಿತ ಪತ್ತೇದಾರಿ ಕಾದಂಬರಿಯ ಮುಖಪುಟದ ಡ್ರಾಗನ್‌ಗೆ ಸ್ಪಾಟ್ ಲ್ಯಾಮಿನೇಶನ್ ಮಾಡಿಸಿದ ಅಂಕಿತದ ಪ್ರಕಾಶ್ ಕಂಬತ್ತಳ್ಳಿ `ಇದು ಕನ್ನಡದ ಮೊದಲ ಸ್ಪಾಟ್ ಲ್ಯಾಮಿನೇಶನ್ ಮಾರಾಯ್ರೆ' ಎಂದಿದ್ದರು; ಬಹುಶಃ ಅದೊಂದೇ ಆ ಪುಸ್ತಕದ ಹೆಗ್ಗಳಿಕೆ; ಹಣ ಗಳಿಕೆಯಲ್ಲಿ ಪುಸ್ತಕ ಸೋತಿದ್ದು ಈಗ ವಾಸ್ತವ.
ನಾನೊಮ್ಮೆ, ೧೯೯೮ರಲ್ಲಿ ಖರ್ಚಿಲ್ಲದೆ ಇಂಥ ಗ್ರಾಫಿಕಲ್ ಪ್ರಯೋಗ ಮಾಡಿದ್ದೆ ಎಂದು ಈಗ ನೆನಪಾಗುತ್ತಿದೆ. ಬಹುಶಃ ಕನ್ನಡದಲ್ಲಿ ಅದೂ ಮೊದಲ ಯತ್ನವೇನೋ, ಗೊತ್ತಿಲ್ಲ. ನನ್ನ ಕವನ ಸಂಕಲನ `ವರ್ತಮಾನದ ಬಿಸಿಲು'ವಿನ ಎಲ್ಲ ಒಂದು ಸಾವಿರ ಮುಖಪುಟಗಳನ್ನು ಕರ್ನಾಟಕದ ಹಿರಿಯ ಕಲಾವಿದರಿಂದ ಖುದ್ದಾಗಿ ಬರೆಸಿದ್ದೆ. ಚಂದ್ರನಾಥ ಆಚಾರ್ಯ, ಚಿ.ಸು.ಕೃಷ್ಣಸೆಟ್ಟಿ, ಸೃಜನ್, ಅಮರನಾಥ್, ಮಹೇಂದ್ರ, ಯು.ಟಿ.ಸುರೇಶ್, ಮೋನಪ್ಪ, ಶ್ಯಾಮ್ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್ – ಈ ಪುಸ್ತಕಗಳಿಗೆ ಅಂದವಾದ ನೂರಾರು ಮುಖಪುಟ ಇಲ್ಲಸ್ಟ್ರೇಶನ್‌ಗಳನ್ನು ಮಾಡಿಕೊಟ್ಟಿದ್ದರು. ಪ್ರತಿಯೊಂದೂ ಮುಖಪುಟವೂ ವಿಶೇಷವಾಗಿತ್ತು; ವಿಶಿಷ್ಟವಾಗಿತ್ತು. ಕವನಗಳು ಬಿಡಿ, ಬಹುಶಃ ಮುಖಪುಟದ ಕಲಾಕೃತಿಯ ಅಂದಕ್ಕಾದರೂ ಈ ಪುಸ್ತಕಗಳು ಕೆಲವರ ಕಪಾಟಿನಲ್ಲಿ ಇರಬಹುದು ಎಂಬ ನಿರೀಕ್ಷೆ ನನ್ನದು. ಇಂಥ ಪ್ರಯೋಗಗಳನ್ನು ಮಾಡುವಾಗ ಮಿತ್ರತ್ವ ಇರಬೇಕು ಎನ್ನುವುದೂ ನಿಜ. ಯಾಕೆಂದರೆ ಈ ಕಲಾವಿದರಾರೂ ನಯಾಪೈಸೆ ಕೇಳದೆ ಪ್ರಯೋಗದ ಖುಷಿಗಾಗಿ ಚಿತ್ರ ಬರೆದುಕೊಟ್ಟವರು.
ಆದರೆ ಪ್ರಯೋಗವಂತೂ ಹೌದಲ್ಲ?
ಉದಾಹರಣೆಗೆ, ಪುಸ್ತಕಗಳನ್ನು ಪ್ರಕಟಿಸಿದ ಮೇಲೆ ಅದರಲ್ಲಿ ಒಂದು ಪೋಸ್ಟ್ ಕಾರ್ಡ್ ಇಟ್ಟು `ನಿಮ್ಮ ಪ್ರತಿಕ್ರಿಯೆಯನ್ನು ಕಳಿಸಿಕೊಡಿ' ಎಂದು ಉತ್ತೇಜಿಸಬಹುದು. ಮಾಯಾಲೋಕದ ಪ್ರಯೋಗಗಳನ್ನು ಇನ್ನೂ ವಿಸ್ತರಿಸಬಹುದು; ಪ್ರಕಟಣೆಯ ವೆಚ್ಚವೇನೋ ಹೆಚ್ಚುತ್ತದೆ. ಈಗಾಗಲೇ ಕನ್ನಡದಲ್ಲಿ ವಾರಕ್ಕೆ ಹತ್ತಾರು ಪುಸ್ತಕಗಳು ಆರಾಮಾಗಿ ಪ್ರಕಟವಾಗುತ್ತ ಇರುವಾಗ ಇಂಥ ಪ್ರಬುದ್ಧತೆಯ ಪ್ರಯೋಗಕ್ಕೆ ಹೊರಡುವುದು ಅಷ್ಟೇನೂ ವಿಫಲವಾಗದು ಎಂಬುದೇ ನನ್ನ ಅನಿಸಿಕೆ.
ಒಂದು ಟೆಲಿವಿಜನ್ ಚಾನೆಲ್‌ನಲ್ಲಿ ಬರುವ ಜನಪ್ರಿಯ ಧಾರಾವಾಹಿಯ ಒಂದು ವಾರದ ಉತ್ಪಾದನಾ ವೆಚ್ಚವನ್ನು ಹಾಕಿದರೆ ಸಾಕು, ಇಂಥ ಪ್ರಯೋಗಗಳನ್ನು ಆರಾಮಾಗಿ ಮಾಡಬಹುದು. ಟಿವಿ ಚಾನೆಲ್‌ಗಳು ಮಾಡುವಂತೆ ಜಾಹೀರಾತನ್ನು ಪ್ರಕಟಿಸಿದರೂ ಯಾವುದೇ ಅಪಚಾರವಿಲ್ಲ. ಪುಸ್ತಕಗಳ ಮೊದಲ ಮತ್ತು ಕೊನೆಯ ಒಳಪುಟಗಳಲ್ಲಿ ಜಾಹೀರಾತು ಪ್ರಕಟವಾದರೆ ಯಾರಿಗೂ ಬೇಸರವಿಲ್ಲ ; ಅವು ಸಿರಿಯಲ್‌ಗಳ ನಡುವೆ ಬರುವಂತೆ ಪುಟಗಳ ನಡುವೆ ನುಸುಳಬಾರದು ಅಷ್ಟೆ!
ಮುದ್ರಣದ ಗುಣಮಟ್ಟದಲ್ಲಿ ಸಮಾಧಾನಕರ ಎನ್ನಬಹುದಾದ ಕನಿಷ್ಟ ಗುಣಮಟ್ಟವನ್ನು ಸಾಧಿಸಿರುವ ಕನ್ನಡ ಪ್ರಕಟಣಾ ರಂಗಕ್ಕೆ ಇಂಥ ಹಲವು ಪ್ರಯೋಗಗಳನ್ನು ಮಾಡುವ ಅವಕಾಶಗಳು ವಿಪುಲವಾಗಿವೆ. ಸ್ಟೀರಿಯೋಟೈಪ್ ಪ್ರಕಟಣೆಗಳಿಂದ ಹೊರಬಂದು ಪ್ರಯೋಗಗಳನ್ನು ಎಸೆಯಲು ಇದು ಸಕಾಲ.
………………..

Leave a Reply

Theme by Anders Norén