ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

William H Prescott: A beacon of knowledge

ಒಳಗಣ್ಣಿನ ಇತಿಹಾಸಕಾರ ಪ್ರೆಸ್ಕಾಟ್ ನೆನಪಿಗೆ…..

 

 

೧೯೭೦ರಲ್ಲಿ ಜಾನ್ ಹೆಮ್ಮಿಂಗ್ಸ್ ಎಂಬ ಇತಿಹಾಸಕಾರ `ದಿ ಕಾನ್‌ಕ್ವೆಸ್ಟ್ ಆಫ್ ಇಂಕಾಸ್' ಎಂಬ  ಇತಿಹಾಸ ಸಂಶೋಧನೆಯ ಪುಸ್ತಕವನ್ನು ಬರೆದ : `ಈ ಪುಸ್ತಕದಲ್ಲಿ ಆತ ಹೆಮ್ಮೆಯಿಂದ ಹೇಳಿಕೊಂಡಿದ್ದಿಷ್ಟು: ಅಮೆರಿಕಾದಲ್ಲಿ ನಡೆದ ಸ್ಪಾನಿಶ್ ಆಕ್ರಮಣಗಳ ಬಗ್ಗೆ  ವಿಲಿಯಂ ಹಿಕ್ಲಿಂಗ್ ಪ್ರೆಸ್ಕಾಟ್‌ನ ನೆರಳಿನಲ್ಲೇ ಬರೆದಿದನೆ.'
ಅದಿರಲಿ, ೧೯೧೮ರಲ್ಲಿ ಅಮೆರಿಕಾದ ಇನ್ನೊಬ್ಬ ಇತಿಹಾಸಕಾರ ರೋಜರ್ ಮೆರ್ರಿಮ್ಯಾನ್ ಬರೆದಿದ್ದ: ಫರ್ಡಿನ್ಯಾಂಡ್ ಮತ್ತು ಇಸಾಬೆಲ್ಲಾ ಇತಿಹಾಸದ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿದ್ದರೂ ಪ್ರೆಸ್ಕಾಟ್‌ನ ಗ್ರಂಥಗಳಲ್ಲಿ ಇರುವ ಖಚಿತತೆ, ವಾಸ್ತವತೆ ಬೇರೆಲ್ಲೂ ಇಲ್ಲ. ಅದು ಈಗಲೂ ಮಾದರಿ ಗ್ರಂಥವೇ.
ಯಾರೀತ ಪ್ರೆಸ್ಕಾಟ್?
ಐದಾರು ವರ್ಷಗಳ ಹಿಂದೆ ದಿ ಕಾನ್‌ಕ್ವೆಸ್ಟ್ ಆಫ್ ಪೆರು ಎಂಬ ಪುಸ್ತಕವನ್ನು ನನ್ನ ಹಿರಿಯ ಹಳೆಪುಸ್ತಕ ಸಂಗ್ರಹಕಾರ ಶ್ರೀ ಮಲ್ಯರಿಂದ ಖರೀದಿಸಿ ಓದುತ್ತಿದ್ದೆ.   ಮೊದಲೇ ಹರಿದುಹೋಗಿದ್ದ ಈ ಪುಸ್ತಕದ ಪೀಠಿಕೆಯನ್ನು ಯಾಕಾದರೂ ಓದಬೇಕು ಎಂದು  ಕೈ ಬಿಟ್ಟಿದ್ದೆ. ಒಮ್ಮೆ ಯಾಕೋ ಓದಿಬಿಡೋಣ ಎನ್ನಿಸಿ ಪುಟ ಬಿಚ್ಚಿದೆ: ಅಂದಿನಿಂದ ನನ್ನ ಎದೆಕಟಾಂಜನದಲ್ಲಿ ವಿಲಿಯಂ ಹಿಕ್ಲಿಂಗ್ ಪ್ರೆಸ್ಕಾಟ್ ಮನೆ ಮಾಡಿದ್ದಾನೆ. ತನ್ನ ಪ್ರಾಂಜಲ ಗುಣಗಳನ್ನು ಯಾವುದೇ ಭಾವೋದ್ವೇಗವೂ ಇಲ್ಲದೆ ಈ ಮುನ್ನುಡಿಯಲ್ಲಿ ಪ್ರಕಟಿಸಿಕೊಂಡಿದ್ದಾನೆ.
ಇಷ್ಟಕ್ಕೂ ಪೆರುವಿನ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ೧೮೪೭ರಲ್ಲಿ ಬರೆದ ಪ್ರೆಸ್ಕಾಟ್‌ನ ಕಣ್ಣುಗಳೇ ದೃಷ್ಟಿ ಕಳೆದುಕೊಂಡು ೩೩ ವರ್ಷಗಳು ಗತಿಸಿದ್ದವು.  ಹಾರ್ವರ್ಡ್ ಕಾಲೇಜಿನಲ್ಲಿ ಓದುತ್ತಿದ್ದಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಬ್ರೆಡ್ ತುಂಡು ಅವನ ಒಂದು ಕಣ್ಣಿನ ದೃಷ್ಟಿಯನ್ನೇ ಕಸಿದಿತ್ತು, ಕೊಂಚ ಕಾಣುತ್ತಿದ್ದ ಇನ್ನೊಂದು  ಕಣ್ಣೂ ಕ್ರಮೇಣ ಕುಸಿಯಿತು. ಹಗಲಿನ ಬೆಳಕೆಂದರೆ ಪ್ರೆಸ್ಕಾಟ್‌ಗೆ ನರಕಯಾತನೆಯಾಯಿತು. ಬೇಕಾದರೆ ಅವನು ಕುರುಡುಗತ್ತಲಿನಲ್ಲಿ, ಅವನ ಕಣ್ಣಿಗೆ ಹೊಂದಿಸಿದ ಕರಾರುವಾಕ್ಕಾದ ಪ್ರಮಾಣದ ಮಂದ ಬೆಳಕಿನಲ್ಲಿ ಏನನ್ನಾದರೂ ಓದಲು ಸಾಧ್ಯವಿತ್ತು.
ಆದರೆ ಪ್ರೆಸ್ಕಾಟ್ ೧೮೨೨ರಲ್ಲೇ, ತನ್ನ ಮದುವೆಯಾದ ತರುವಾಯ ನಿರ್ಧರಿಸಿದ್ದ: ಇನ್ನು ಹತ್ತು ವರ್ಷಗಳ ಕಾಲ ಓದಬೇಕು;  ಅದಕ್ಕಾಗಿ ನಾಲ್ಕೇ ವರ್ಷಗಳಲ್ಲಿ ಇಟ್ಯಾಲಿಯನ್, ಫ್ರೆಂಚ್, ಲ್ಯಾಟಿನ್ ಮತ್ತು ಸ್ಪ್ಯಾನಿಶ್ ಭಾಷೆ ಕಲಿಯಬೇಕು ಎಂದು ನಿರ್ಧರಿಸಿದ್ದ. ಆಮೇಲಿನ ಹತ್ತು ವರ್ಷಗಳ ಕಾಲ ಬರೆಯಬೇಕು ಎಂದೂ ಕಾಲಮಿತಿ ಹಾಕಿಕೊಂಡಿದ್ದ.  ಆದರೆ ತನ್ನ ಯೋಜನೆಯನ್ನು ಬದಲಿಸಿ ಸ್ಪಾನಿಶ್ ಭಾಷೆಗೇ ಅಂಟಿಕೊಂಡ. ಆಮೇಲೆ ಆರು ವರ್ಷಗಳಲ್ಲಿ ಫರ್ಡಿನ್ಯಾಂಡ್ ಮತ್ತು ಇಸಾಬೆಲ್ಲಾ ಗ್ರಂಥವನ್ನು ಬರೆಯುವುದಕ್ಕೆ ಯೋಜನೆ ಹಾಕಿಕೊಂಡ. ಏಳೂವರೆ ವರ್ಷಗಳಲ್ಲಿ ಅದನ್ನು ಬರೆದು ಮುಗಿಸಿದ. ಇದು ನಡೆದದ್ದು ೧೯೩೭ರಲ್ಲಿ. ಈ ಗ್ರಂಥ ಮೂರು ಸಂಪುಟಗಳಷ್ಟು ದೊಡ್ಡದು.
ಆಮೇಲೆ ಪ್ರೆಸ್ಕಾಟ್ ಮೆಕ್ಸಿಕೋ ಇತಿಹಾಸಕ್ಕೆ ತಿರುಗಿದ. ೧೮೪೩ರ ಡಿಸೆಂಬರ್ ೬ರಂದು `ದಿ ಹಿಸ್ಟರಿ ಆಫ್ ದಿ ಕಾನ್‌ಕ್ವೆಸ್ಟ್ ಆಫ್ ಮೆಕ್ಸಿಕೋ' ಗ್ರಂಥವು ಬಿಡುಗಡೆಯಾಯಿತು. ಇದು ಏಳು ಸಂಪುಟಗಳಷ್ಟು ದೊಡ್ಡದು. ನಾಲ್ಕೇ ತಿಂಗಳುಗಳಲ್ಲಿ ನಾಲ್ಕು ಸಾವಿರ ಪ್ರತಿಗಳು ಮಾರಾಟವಾದವು. ಇನ್ನುಳಿದ ಸಾವಿರ ಪ್ರತಿಗಳೂ ಮತ್ತೆ ನಾಲ್ಕು ತಿಂಗಳುಗಳಲ್ಲಿ ಮುಗಿದುಹೋದವು. ಈ ಗ್ರಂಥದ ಮೇಲೆ ೧೩೦ಕ್ಕೂ ಹೆಚ್ಚು ಪತ್ರಿಕೆಗಳು ವಿಮರ್ಶೆ ಬರೆದು ಶ್ಲಾಘಿಸಿದವು.

ಈಗಲೂ ನೀವು ಅಮೆಝಾನ್ ಡಾಟ್‌ಕಾಮ್ ಜಾಲತಾಣಕ್ಕೆ ಹೋದರೆ ಈ ಪುಸ್ತಕದ ಕಾಂಪಾಕ್ಟ್ ಡಿಸ್ಕ್‌ಗಳು ಮಾರಾಟಕ್ಕಿವೆ. ಇಂದಿಗೂ ಮೆಕ್ಸಿಕೋ ಇತಿಹಾಸ ಕುರಿತಂತೆ ಪ್ರೆಸ್ಕಾಟ್ ಬರೆದ ಹಾಗೆ ವಾಸ್ತವವನ್ನು ಬಿಂಬಿಸಿದವರಿಲ್ಲ. ಅವನ ಹಾಗೆ ಇತಿಹಾಸವನ್ನು ಯಥಾವತ್ ಬರೆದವರಿಲ್ಲ.  ತಾನೇ ಕ್ರೈಸ್ತ ಆಕ್ರಮಣಕಾರರ ಭಾಗವಾಗಿದ್ದರೂ ಮೆಕ್ಸಿಕೋ ಇತಿಹಾಸವನ್ನು ನಿರ್ಲಿಪ್ತವಾಗಿ ಬರೆದ ಪ್ರೆಸ್ಕಾಟ್ ಈ ಗ್ರಂಥದಲ್ಲಿ ತನ್ನೆಲ್ಲ eನವನ್ನು ಯಥೋಚಿತವಾಗಿ ಧಾರೆ ಎರೆದಿದ್ದಾನೆ.
ಹಾಗಾದರೆ ಪ್ರೆಸ್ಕಾಟ್ ಓದುತ್ತಿದ್ದುದಾದರೂ ಹೇಗೆ? ಜೇಮ್ಸ್ ಇಂಗ್ಲಿಶ್, ಹೆನ್ಸಿ ಶೀವರ್ ಸೀಸ್ಮಂಡ್ಸ್ , ಡೈಟ್ ವಿಲಿಯಮ್ಸ್ ಮುಂತಾದವರು ಅವನ ಮೂಲ ಮಾಹಿತಿಗಗಿ ಪುಸ್ತಕಗಳನ್ನು  ಓದುತ್ತಿದ್ದರು. ಸದ್ದಿಲ್ಲದೆ ಕುಳಿತ ಪ್ರೆಸ್ಕಾಟ್ ಎಲ್ಲವನ್ನೂ ಕೆಳಿ ತನ್ನ ಸ್ಮರಣಕೋಶದಲ್ಲಿ ಸಾವಕಾಶವಾಗಿ ತುಂಬಿಕೊಳ್ಳುತ್ತಿದ್ದ. ಆಮೇಲೆ ಇತಿಹಾಸದ ಬಗ್ಗೆ ತನ್ನದೇ ಸ್ವತಂತ್ರ ಚಿಂತನೆಯನ್ನು ಹೊಂದಿದ ಪಠ್ಯವನ್ನು ನಾಕ್ಟೋಗ್ರಾಫ್ ಎಂಬ ಅಂಧರು ಬಳಸುವ ಚೌಕಟ್ಟನ್ನು ಬಳಸಿ ಬರೆಯಲು ಕೂರುತ್ತಿದ್ದ. ಮಂದ ಬೆಳಕಿನಲ್ಲಿ ತಂತಿ ಸಾಲುಗಳನ್ನು ಆಧರಿಸಿ ದಿನಗಟ್ಟಳೆ ಬರೆಯುವಾಗ ಪ್ರೆಸ್ಕಾಟ್ ಪ್ರತಿ ಸಲ ೫೦ – ೬೦ ಪುಟಗಳಷ್ಟು ಇತಿಹಾಸ ಪಠ್ಯವನ್ನು ತನ್ನೊಳಗೇ ನಿಖರವಾಗಿ ಕಲ್ಪಿಸಿಕೊಂಡೇ ಶುರು ಮಾಡುತ್ತಿದ್ದ. ಕೊನೆಕೊನೆಗೆ ನಾಕ್ಟೋಗ್ರಾಫ್ ಕೂಡಾ ಆತನಿಗೆ ಒಲಿಯಿತು. ಸಲೀಸಾಗಿ ಪುಟಗಟ್ಟಳೆ ಬರೆದ ಪ್ರೆಸ್ಕಾಟ್ ಎಲ್ಲಿಯೂ ವಾಸ್ತವದ ಹದ ತಪ್ಪಲಿಲ್ಲ. ಇತಿಹಾಸವನ್ನು ಪ್ರೀತಿಸಿ ಬರೆದ. ಬದುಕಿನ ವ್ಯಾಮೋಹವಲ್ಲ, ಕಲಿಕೆಯ ಹಸಿವಿನಿಂದ ಬರೆದ. ತನ್ನ ಅಂಧತ್ವದಿಂದ ಅಸ್ತವ್ಯಸ್ತಗೊಂಡ ಬದುಕನ್ನು  ಒಳಗಣ್ಣಿನ ಬೆಳಕಿನಿಂದ ಬೆಳಗಿಸಿಕೊಂಡ.  ತಾನು ಬರೆದದ್ದನ್ನು ತನಗೇ ಓದಲಾಗುತ್ತಿಲ್ಲವಲ್ಲ ಎಂದು ಪ್ರೆಸ್ಕಾಟ್ ಎಂದೂ ವ್ಯಥಿಸಲಿಲ್ಲ.   ಕಿವಿಯನ್ನೇ ಕಣ್ಣಾಗಿಸಿಕೊಳ್ಳಲು ಯಾವತ್ತೋ ನಿರ್ಧರಿಸಿದೆ ಎಂದು ಪ್ರೆಸ್ಕಾಟ್ ತನ್ನ ಪೆರು ಇತಿಹಾಸದ ಮುನ್ನುಡಿಯಲ್ಲಿ ನುಡಿಯುತ್ತಾನೆ.
ಅದಾದ ಮೇಲೆಯೇ ಪ್ರೆಸ್ಕಾಟ್ ಪೆರುವಿನ ಬಗ್ಗೆ ಸಂಶೋಧನೆ ಶುರು ಮಾಡಿದ್ದು. ಈ ಪುಸ್ತಕವು ಈಗಲೂ ಒಂದು ಅಧಿಕೃತ ಮೂಲಾಧಾರ ಗ್ರಂಥ ಎಂದೇ ಹೆಸರಾಗಿದೆ. ಆಮೇಲೆ ಪ್ರೆಸ್ಕಾಟ್  ಇನ್ನೂ ಎಡರು ಪುಸ್ತಕಗಳನ್ನು ಬರೆದ: ಸ್ಪೈನ್ಸ್ ಕಾನ್‌ಕ್ವೆಸ್ಟ್ ಆಫ್ ದಿ ಮೂರ್ಸ್, ದಿ ಹಿಸ್ಟರಿ ಆಫ್ ಫಿಲಿಪ್ ೨. 
ಅಮೆರಿಕಾದ ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿ ೧೭೯೬ರಲ್ಲಿ ಹುಟ್ಟಿದ ಪ್ರೆಸ್ಕಾಟ್ ೧೮೫೯ರಲ್ಲಿ ಕಣ್ಮರೆಯಾದ.
ಪ್ರತಿದಿನ ಐದು ಮೈಲಿಗಳ ನಡೆದಾಟ, ಐದು ಗಂಟೆಗಳ ಸಾಹಿತ್ಯ ಚಟುವಟಿಕೆ, ಎರಡು ಗಂಟೆಗಳ ಕಾದಂಬರಿ (ಸ್ಕಾಟ್, ಡ್ಯೂಮಾ, ಡಿಕನ್ಸ್) ಓದು, – ಹೀಗೆ ಎಲ್ಲಿಯೂ ಪ್ರೆಸ್ಕಾಟ್ ತಾಳ ತಪ್ಪದ ಬದುಕು ನಡೆಸಿದ. ನಡೆಯುವಾಗೆಲ್ಲ ಕೋಣೆಯೊಳಗೆ ಬಂದು ಬರೆಯುವುದೇನು ಎಂದು ಕಲ್ಪಿಸಿಕೊಂಡ. ಮೆಕ್ಸಿಕೋ ಇತಿಹಾಸದ ಬಗ್ಗೆ ಅವನನ್ನು ಮನಸಾರೆ ಹೊಗಳದವರೇ ಇಲ್ಲ. ಪುಸ್ತಕವಂತೂ ಎಷ್ಟು ಶೈಲಿಯುತವಾಗಿದೆ ಎಂದೇ ಈಗಲೂ ವಿಮರ್ಶಕರು ಹೇಳುತ್ತಾರೆ.
ತನಗೆ ಬಂದ ವರಮಾನದ ಹತ್ತರಲ್ಲೊಂದು ಭಾಗವನ್ನು ಪ್ರೆಸ್ಕಾಟ್ ದೇಣಿಗೆಯಾಗಿ ನೀಡಿದ.
ನಾನು ಇನ್ನೇನು ಕುರುಡನ ಕಥೆಯನ್ನೇ ಬರೆಯಬೇಕಷ್ಟೆ ಎಂದು ಕೈ ಹಿಸುಕಿಕೊಂಡ ಪ್ರೆಸ್ಕಾಟ್ `ಪುಸ್ತಕದಲ್ಲಿ ತಪ್ಪಿದ್ದರೆ ಕ್ಷಮಿಸಿ' ಎಂದು ಓದುಗರನ್ನು ಕೇಳಿಕೊಂಡ.
ಕಣ್ಣಿದ್ದು ಬರೆಯುವಾಗ ನಾವೆಲ್ಲ ಒಂದಷ್ಟು ಎಚ್ಚರ ವಹಿಸೋಣವೆ? ಶಿಸ್ತಿನ ಬದುಕಿನತ್ತ ಕೊಂಚ ಮನಸ್ಸು ಮಾಡೋಣವೆ?
ಈ ಲಿಂಕ್‌ನಲ್ಲಿ ದಿ ಕಾನ್‌ಕ್ವೆಸ್ಟ್ ಆಫ್ ಪೆರು ಪುಸ್ತಕವೂ ಇದೆ. ಅದರಲ್ಲಿ ಪ್ರೆಸ್ಕಾಟ್‌ನ ಮನದಾಳದ ಮಾತುಗಳೂ ಇವೆ. ಓದಿ.

 

 

Leave a Reply

Theme by Anders Norén