ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

Youth : A lovely music

ಯುವಪೀಳಿಗೆಯೆಂಬ ಸುಮಧುರ ಸಂಗೀತ

`ನನಗೆ ಸಂಗೀತ ಕೇಳೋದಕ್ಕೆ ಇಷ್ಟ. ಆದ್ರೆ ಯಾವ ರಾಗವೂ ಗೊತ್ತಾಗಲ್ಲ. ಸುಮ್ನೆ ಕೇಳ್ತೀನಿ'  – ಈ  ಮಾತನ್ನು ನಾವು ಯಾವಾಗಲೂ ಕೇಳುತ್ತೇವೆ. ನಿಜವೇ. ಸಂಗೀತವನ್ನು ಕೇಳುವವರಿಗೆ ರಾಗಗಳ ಬಗ್ಗೆ ಯಾವ ಅರಿವೂ ಇರಬೇಕೆಂದಿಲ್ಲ.  ಸಂಗೀತದ ರಸ ಗ್ರಹಿಸುವ ಭಾವಾತ್ಮಕತೆ ಇದ್ದರೆ ಸಾಕು. ಈಗಂತೂ ಸಂಗೀತವು ಡಿಜಿಟಲ್ ಕ್ರಾಂತಿಗೆ ಪಕ್ಕಾದ ಮೇಲೆ ಸಂಗೀತವನ್ನು ಖುಷಿಯಿಂದ ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಪೂರ್ವಾಂಚಲ ರಾಜ್ಯಗಳಲ್ಲಿ ಮಾತ್ರ ಬಾಲಿವುಡ್ ಸಂಗೀತದ ಪ್ರಭಾವವಿತ್ತು. ಈಗ ಕರ್ನಾಟಕದಂಥ ದಕ್ಷಿಣದ ರಾಜ್ಯಗಳಲ್ಲೂ ಬಾಲಿವುಡ್ ಹಾಡುಗಳು ಕೇಳಿಬರುತ್ತಿವೆ. ಕನ್ನಡದ ಹಾಡುಗಳನ್ನು ಹಿಂದಿ ಗಾಯಕರು ಹಾಡುತ್ತಿದ್ದರೆ, ಬಾಲಿವುಡ್‌ಗೆ ದಕ್ಷಿಣದ ಪ್ರತಿಭೆ ಎ.ಆರ್. ರೆಹಮಾನ್ ಸಂಗೀತ ಕೊಡುತ್ತಿದ್ದಾರೆ. ನಮ್ಮ ಯುವಪೀಳಿಗೆಯು ಫಾಸ್ಟ್ ಮ್ಯೂಸಿಕ್ ಸಂಸ್ಕೃತಿಗೆ ಪಕ್ಕಾಗಿರುವುದು  ನಿಜ. ಆದರೆ ಅದೇ ಪ್ರಮಾಣದಲ್ಲಿ ಸಂಗೀತದ ನಿಜಸುಖಕ್ಕೆ ಮಾರುಹೋಗಿರುವದೂ ಅಷ್ಟೇ ನಿಜ.
ಸಂಗೀತದ ಪ್ರತಿಯೊಂದು ಕಣವೂ ಸ್ಫಟಿಕಶುದ್ದ ರೂಪದಲ್ಲಿ ನಮ್ಮೊಳಗೆ ಹರಿದುಬರಬೇಕು ಎಂಬ ತವಕ ಹೆಚ್ಚಾಗಲು ಡಿಜಿಟಲ್ ಕ್ರಾಂತಿಯೇ ಕಾರಣ ಎಂದರೆ ತಪ್ಪಿಲ್ಲ. ಪಂಡಿತ್ ಶಿವಕುಮಾರ್ ಶರ್ಮಾರವರ ಸಂತೂರಿನ ಕಣಕಣ ದನಿಯೂ ಜುಳುಜುಳು ಹರಿದು ಬರುತ್ತಿದ್ದರೆ ಎಂಥ ಆಹ್ಲಾದ ಎಂಬದನ್ನು ಬಲ್ಲವರೇ ಬಲ್ಲರು! ಗ್ರಾಮಾಫೋನ್ ರೆಕಾರ್ಡ್‌ಗಳು, ಕ್ಯಾಸೆಟ್‌ಗಳು, ಕಾಂಪಾಕ್ಟ್  ಡಿಸ್ಕ್‌ಗಳು, ಐ ಪಾಡ್‌ಗಳು, – ಎಲ್ಲವೂ ಈ ಬಗೆಯ ಕ್ರಿಸ್ಟಲ್ ಕ್ಲಿಯರ್ ಸರೌಂಡ್ ಸೌಂಡ್ ವ್ಯವಸ್ಥೆಯತ್ತ ಡಿಜಿಟಲ್ ಮಾರ್ಗದಲ್ಲಿ ಹಾಕಿದ ಹೆಜ್ಜೆಗಳೇ. ಈಗ ಡೈರೆಕ್ಟ್ ಟು ಹೋಮ್ (ಡಿ ಟಿ ಎಚ್) ಮೂಲಕವೂ ಟಿವಿ ಚಾನೆಲ್‌ಗಳ ಜೊತೆಗೇ ರೇಡಿಯೋ ಸ್ಟೇಶನ್‌ಗಳೂ ಮನೆಯೊಳಗೆ ಬಂದಿವೆ. ಏಳು ವರ್ಷಗಳ ಹಿಂದೆ ಭಾರತಕ್ಕೆ ಬಂದ ವರ್ಲ್ಡ್‌ಸ್ಪೇಸ್ ಎಂಬ ಉಪಗ್ರಹ ರೇಡಿಯೋ ಸ್ಟೇಶನ್ ಈಗಲೂ ೪೦ ಡಿಜಿಟಲ್ ಚಾನೆಲ್‌ಗಳ ಮೂಲಕ ಭಾರತದ ಮೂಲೆ ಮೂಲೆಯಲ್ಲೂ ಸಂಗೀತದ ಅಲೆಯನ್ನು ಎಬ್ಬಿಸುವದಕ್ಕೆ ತಯಾರಾಗಿದೆ. ಒಂದು ಆಂಟೆನ್ನಾವನ್ನು ನಿಮ್ಮ ಕಿಟಕಿಯಾಚೆಗೋ, ತಾರಸಿಯ ಮೇಲೋ ಸ್ಥಾಪಿಸಿಕೊಂಡರೆ ಸಾಕು, ಗುಡುಗು ಸಿಡಿಲಿನ ನಡುವೆಯೂ ನೈಜ ಡಿಜಿಟಲ್ ಸಂಗೀತ ರಿಂಗಣಿಸುತ್ತದೆ.
ಕಲಾವಿದರೆಲ್ಲ ನಮಗಾಗಿಯೇ ಈ ಆಂಗಳದಲ್ಲಿ  ಜಮಖಾನ ಹಾಸಿ ಕೂತು ಹಾಡುತ್ತಿದ್ದಾರೆ ಎಂದೆನಿಸುವ ಹಾಗೆ ನಾವು ಸಂಗೀತವನ್ನು ನಿಕಟವಾಗಿ ಅನುಭವಿಸಲು ಸಾಧ್ಯವಾಗಿದೆ. ಈ ಡಿಜಿಟಲ್ ಸಂಗೀತವನ್ನು ಹೆಡ್‌ಫೋನ್ ಮೂಲಕ ಕೇಳಿದರಂತೂ ಜಗವನ್ನೇ ಮರೆಯುವ ಸಂಗೀತಸುಖ ನಮ್ಮೆದೆಗೆ ದಕ್ಕುತ್ತದೆ.
ಬೆಂಗಳೂರಿನ ಮಲ್ಲೇಶ್ವರದ ಕೆನರಾ ಯೂನಿಯನ್‌ನಲ್ಲಿ ನಡೆಯುವ  ಹಿಂದೂಸ್ತಾನಿ ಸಂಗೀತ ಕಚೇರಿಗೆ ಹೋದರೆ, ಅಥವಾ ಗಾಯನ ಸಮಾಜದ ಕರ್ನಾಟಕ ಪದ್ಧತಿಯ ಸಂಗೀತ ಕಚೇರಿಗೆ ಹೋದರೆ ಹಿರಿಯ ತಲೆಗಳೇ ಕಾಣಿಸಿಕೊಳ್ಳುವುದು ವಾಸ್ತವ.  ಹಾಗೆಯೇ ಬಗೆಬಗೆಯ ಆಧುನಿಕ ಸಂಗೀತಕ್ಕಾಗಿ ಯುವಕರು ಹಾತೊರೆಯುವುದೂ ವಾಸ್ತವ. ಎರಡೂ ಪೀಳಿಗೆಯ ಜನರಿಗೆ ಅವರದ್ದೇ ಆದ ಒಳಜಗತ್ತನ್ನು  ವಿಸ್ತಾರವಾಗಿ ಮೂಡಿಸುವ ಕೆಲಸವನ್ನು ಸಂಗೀತ ಮಾಡುತ್ತದೆ. ವಿಚಿತ್ರವೆಂದರೆ ಶಾಸ್ತ್ರೀಯ ಸಂಗೀತದಲ್ಲಿ ಯುವಪೀಳಿಗೆಯನ್ನು ಕಾಣಬಹುದು.  ಆದರೆ ಆಧುನಿಕ ಸಂಗೀತ ಜಗತ್ತಿನಲ್ಲಿ ಹಿರಿಯರಿಗೆ ಆಸಕ್ತಿಯೇ ಇಲ್ಲ!
ಪೀಳಿಗೆಯಿಂದ ಪೀಳಿಗೆಗೆ ಸಂಗೀತದ ಆಸಕ್ತಿ ಬದಲಾಗುತ್ತ ಹೋಗುತ್ತದೆ. ಆದರೂ ನೋಡಿ, ನಮ್ಮ ಅದ್ನಾನ್ ಸಾಮಿ ಹೇಳುವ ವಿಷಾದಭರಿತ ಗೀತೆಗಳು ಎಷ್ಟು ತಟ್ಟುತ್ತವೆ…. ಅಥವಾ ಹಿಮೇಶ್ ರೇಶಮಿಯಾ ಅನುನಾಸಿಕಯುಕ್ತವಾಗಿ ಹಾಡಿದ ಹಾಡೂ ನಮ್ಮನ್ನು ಎಲ್ಲೋ ಕಾಡುತ್ತದೆ….. ಬದಲಾದ ಸಂಗೀತದಲ್ಲೂ ಪ್ರೀತಿ ಇದೆ … ವಿಷಾದವಿದೆ… ನೋವಿದೆ….  ಕೊನೆಗೆ ಎಲ್ಲ ಹಾಡಿನ ಉದ್ದೇಶವೂ ಎದೆಯೊಳಗೊಂದು ಭಾವಸಂಪುಟವನ್ನು ತೆರೆಯುವುದೇ ಅಲ್ಲವೆ?
ನಮ್ಮ ಡಿಜಿಟಲ್ ತಂತ್ರeನವು ಬೆಳೆದು ಆಡಿಯೋ ವಿಡಿಯೋ ಪ್ರಸರಣವು ಅತ್ಯುನ್ನತ ಗುಣಮಟ್ಟವನ್ನು ಸಾಧಿಸುವುದಕ್ಕೂ, ನಮ್ಮ ಯುವಕರು ನಾಗರಿಕತೆಯ ಹೊಸ ದಿಕ್ಕುಗಳಲ್ಲಿ ಸಿಲುಕಿದ ಹೊತ್ತಿಗೇ ಸಂಗೀತವು ಗಣಕಗಳ ಮೂಲಕ ಮತ್ತೆ ಮೂಡುವುದಕ್ಕೂ ತಾಳೆ ಹೋಗಿದ್ದರೆ ಅದನ್ನು ನಮ್ಮ ಭಾಗ್ಯ ಎಂದೇ ಹೇಳಬೇಕು! ನನಗಂತೂ ಮುಂದಿನ ದಿನಗಳಲ್ಲಿ ಸಂಗೀತಕ್ಕೆ ಇನ್ನಷ್ಟು ಒಳ್ಳೆಯ ಆಯಾಮಗಳು ಸಿಗುತ್ತವೆ ಎಂದೇ ಅನ್ನಿಸುತ್ತದೆ. ಇತ್ತೀಚೆಗಷ್ಟೆ ಬೆಂಗಳೂರಿನ ಸಂಗೀತಗಾರ, ಎಲೆಕ್ಟ್ರಾನಿಕ್ ಸಂಗೀತ ಸಾಧನಗಳ ತಯಾರಕ, ರೇಡೆಲ್ ಇಂಡಿಯಾದ ರಾಜ್‌ನಾರಾಯಣ್, ಡಿಜಿಟಲ್ ವೀಣೆಯನ್ನು ವಿಧ್ಯಕ್ತವಾಗಿ ಪೇಟೆಂಟ್ ಪಡೆದಿದ್ದ್ದಾರೆ. ಸ್ವತಃ ಕೊಳಲು ವಿದ್ವಾಂಸರಾದ ಅವರಿಗೆ ಸಂಗೀತವನ್ನು ಡಿಜಿಟೈಸ್ ಮಾಡುವುದರಲ್ಲೇ ಆಸಕ್ತಿ. ಸಾವಿರಾರು ವರ್ಷಗಳ ಹಿಂದೆ ಮೂಡಿದ ಕರಾರುವಾಕ್ ಕಲೆಗೆ ಡಿಜಿಟಲ್ ಆಯಾಮ ತಂದ ಅವರನ್ನು ಅಭಿನಂದಿಸಲೇಬೇಕು.
ಕನಿಷ್ಠ ನಾಲ್ಕು ದಶಕಗಳಿಂದ ಸಂಗೀತವನ್ನು ಡಿಜಿಟೈಸಸಿ ಮಾಡುವ ಕೆಲಸ ನಡೆದಿದ್ದರೂ, ಈಗಷ್ಟೇ ಅದು ವೇಗ ಪಡೆದಿದೆ. ವಿದೇಶದಲ್ಲಿ ಈಗ ಎಲೆಕ್ಟ್ರಾನಿಕ್ ಬಾನ್ಸುರಿ  ತಯಾರಾಗಿದೆ.  ಇನ್ನೂ ಹಲವು ಸಾಧನಗಳು ಡಿಜಿಟಲ್ ಅವತಾರ ಪಡೆದಿವೆ. ಯಮಾಹಾ ಸೌಂಡ್ ಕಾರ್ಡಿನಿಂದ ಹಿಡಿದು ಈಗಿನ ಕ್ರಿಯೇಟಿವ್ ಸರೌಂಡ್ ವ್ಯವಸ್ಥೆಯವರೆಗೆ ಕಂಡುಬಂದ ಡಿಜಿಟಲ್ ಕ್ರಾಂತಿ ಮುಂದೆ  ಮತ್ತಷ್ಟು ಅಚ್ಚರಿಗಳಿಗೆ ಕಾರಣವಾಗಲಿದೆ. ಭಾರತೀಯ ಬೋಸ್ ಸೌಂಡ್ ಸಾಧನಗಳು ಶಬ್ದದ ಗುಣಮಟ್ಟಕ್ಕೆ ಸುಪ್ರಸಿದ್ಧವಾಗಿವೆ.
ಇಷ್ಟಾಗಿಯೂ ಸಂಗೀತ ಗೊತ್ತಿದ್ದರೆ ಮಾತ್ರ ಈ ಸಾಧನಗಳಿಂದ ಲಾಭ ಪಡೆಯಬಹುದು. ಸಂಗೀತ ಕಲಿಯುವುದು ಎಂದರೆ ಶಾಸ್ತ್ರೀಯವಾಗಿಯೇ ಆಗಬೇಕಷ್ಟೆ. ಕಲಿಕೆಯ ಸ್ವರೂಪ ಬೇರೆಯಾಗಿರಬಹುದು. ಆದರೆ ಶಾಸ್ತ್ರೀಯ, ಲಘು, ಸುಗಮ, ಸಿನೆಮಾ – ಎಲ್ಲ  ಸಂಗೀತಕ್ಕೂ ಶಾಸ್ತ್ರದ ಆಧಾರ ಇದ್ದೇ ಇದೆ. ಡಿಜಿಟಲ್ ಸಾಧನಗಳು ದನಿಯ ರೆಸೊಲುಶನ್‌ನ್ನು ಹೆಚ್ಚು ಮಾಡಿವೆ ಅಷ್ಟೆ. ನಮ್ಮ ಯುವಪೀಳಿಗೆಯು ಈ ಡಿಜಿಟಲ್ ಕ್ರಾಂತಿಯನ್ನು ಬಳಸಿಕೊಂಡು ನಮ್ಮ ಮನುಕುಲದ ಮನಸ್ಸಿಗೆ ಇನ್ನಷ್ಟು ಸಂತೋಷ ನೀಡುತ್ತದೆ ಎಂಬ ಭರವಸೆ ನನಗಿದೆ.
ಬೆಂಗಳೂರಿನ ನನ್ನ ಮಿತ್ರ, ಸಂಗೀತದ ವಿದ್ಯಾರ್ಥಿ ದೀಪಕ್ ಒಮ್ಮೆ ನನಗೆ ೧೪೦ ಗೈಗಾಬೈಟ್‌ನಷ್ಟು (ಸುಮಾರು ೨೦೦೦ ಗಂಟೆಗಳ ಕಾಲ ಕೇಳುವಷ್ಟು) ಸಂಗೀತದ ಫೈಲುಗಳನ್ನು ಕೊಟ್ಟರು. ಅದರಲ್ಲಿ ಹಿಂದುಸ್ತಾನಿ ಸಂಗೀತದ ಆಲ್ಬಮ್‌ಗಳೇ ಹೆಚ್ಚಾಗಿದ್ದವಾದರೂ, ದೇಶವಿದೇಶದ ಸಂಗೀತವೆಲ್ಲವೂ ಅದರಲ್ಲಿತ್ತು. ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುವ ಈ ಯುವಕ ಎಷ್ಟೆಲ್ಲ ಪ್ರೀತಿಯಿಂದ ಸಂಗೀತ ಸಂಗ್ರಹಿಸುತ್ತಾರೆ ಎಂದು ಖುಷಿಯಾಯಿತು.  ಈ ಸಂಗೀತವನ್ನು ಅವರು ಸಂಗ್ರಹಿಸಿದ್ದೇ ತನ್ನಂತೇ ಸಂಗೀತ ಕಲೆಹಾಕುವ ಇಂಟರ್‌ನೆಟ್‌ಗೆಳೆಯರಿಂದ. ಮಾರಾಟದ ಉದ್ದೇಶವೇ ಇಲ್ಲದ ಈ ಸಂಗ್ರಹದ ಹುಚ್ಚೇ ನಮ್ಮ ಯುವಪೀಳಿಗೆಯು ಇಂಟರ್‌ನೆಟ್‌ನ ವರ್ಚುಯಲ್ ಜಗತ್ತಿನಲ್ಲೂ ಕಾಳಜಿಯಿದೆ ಎನ್ನುವುದಕ್ಕೆ ನಿದರ್ಶನ.
ಆದ್ದರಿಂದ ನನಗಂತೂ ಯುವಪೀಳಿಗೆಯು ಸಂಪೂರ್ಣ ಹಾಳಾಗಿಹೋಗಿದೆ ಎಂದು ಅನಿಸುತ್ತಿಲ್ಲ.  ನಾಗರಿಕತೆಯ ಹೊಸ ತಿರುವುಗಳು ಅವರ ಮೇಲೂ ಪರಿಣಾಮ ಬೀರಿವೆ ನಿಜ. ಅದೇನು ಹಿರಿಯರನ್ನು ಬಿಟ್ಟಿಲ್ಲವೆ? ಆದರೆ ಯುವ ಮನಸ್ಸುಗಳಲ್ಲಿ  ಈಗಲೂ ಒಳ್ಳೆಯದಕ್ಕಾಗಿ ಹಾತೊರೆವ ಹೃದಯವಿದೆ. ಅದನ್ನು ಅರಿತು ಶ್ರುತಿ ಹಾಕಿದರೆ….
ಒಂದು ಸುಮಧುರ ಸಂಗೀತದ ಹೊಸ ಅಧ್ಯಾಯವೇ ತೆರೆದುಕೊಳ್ಳುತ್ತದೆ.

 

Leave a Reply

Theme by Anders Norén